ಅಖಿಲೇಶ್​ ಯಾದವ್​ ಪ್ರಧಾನಿ ಅಭ್ಯರ್ಥಿ!

ಲಖನೌ: ಉತ್ತರಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಎಸ್​ಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ ಅವರು ಮಹಾಘಟಬಂಧನದ ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ!

ಹೀಗೆಂದು ಅವರ ಪಕ್ಷದ ಕಾರ್ಯಕರ್ತರು ಲಖನೌ ನಗರದ ತುಂಬೆಲ್ಲ ಬ್ಯಾನರ್​ಗಳನ್ನು ಹಾಕಿ ಅಖಿಲೇಶ್ ಯಾದವ್​ ಅವರಿಗೆ ಶುಭ ಕೋರಿದ್ದಾರೆ.

ಈ ರೀತಿಯ ಪೋಸ್ಟರ್​ಗಳು ಲಖನೌನ ಬಹುತೇಕ ಕಡೆಗಳಲ್ಲಿ ರಾರಾಜಿಸುತ್ತಿವೆ. ಅಷ್ಟೇ ಅಲ್ಲ, ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಅವರ ಪಕ್ಷದ ಕೇಂದ್ರ ಕಚೇರಿಯ ಬಳಿ ಮತ್ತು ಅಖಿಲೇಶ್​ ಯಾದವ್​ ಅವರ ನಿರ್ಮಾಣ ಹಂತದ ಮನೆಯ ಎದುರು ಕೂಡ ಹಾಕಲಾಗಿದೆ.

ಹೀಗೆ ನಗರದ ತುಂಬೆಲ್ಲ ಹಾಕಿರುವ ಪೋಸ್ಟರ್​ಗಳಲ್ಲಿ ” ಅಖಿಲೇಶ್​ ಅವರ ಮೇಲೆ ನಮಗಿದೆ ವಿಶ್ವಾಸ- ದೇಶಕ್ಕೆ ಬೇಕು ಹೊಸ ಪ್ರಧಾನಿ,” ಎಂದು ಹಿಂದಿಯಲ್ಲಿ ಬರೆದು ಶುಭ ಕೋರಲಾಗಿದೆ. ಇದೇ ಪೋಸ್ಟರ್​ನಲ್ಲಿ ಮುಲಾಯಂ ಸಿಂಗ್​ ಯಾದವ್​ ಅವರ ಚಿತ್ರವನ್ನು ಸಣ್ಣದಾಗಿ ಹಾಕಲಾಗಿದೆ. ಇದು ಘಟಬಂಧನ ನಾಯಕರಿಂದ ಆದ ಅಧಿಕೃತ ಘೋಷಣೆಯೇನಲ್ಲ.

ಜನವರಿ 15ರಂದು ಮಾಯಾವತಿ ಅವರ ಹುಟ್ಟುಹಬ್ಬದಂದು ಬಿಎಸ್​ಪಿ ಕಾರ್ಯಕರ್ತರು ಇದೇ ರೀತಿಯ ಪೋಸ್ಟರ್​ಗಳನ್ನು ಹಾಕಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. ಇದೇ ಹಿನ್ನೆಲೆಯಲ್ಲಿ ಎಸ್​ಪಿ ಕಾರ್ಯಕರ್ತರು ಹೀಗೆ ಮಾಡಿದ್ದಾರೆ ಎಂದು ಉತ್ತರಪ್ರದೇಶದ ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ.