ಬೆಂಗಳೂರು: ಚೀನಾದಲ್ಲಿ ಎಚ್‌ಎಂಪಿವಿ ವೈರಸ್ ಹರಡುತ್ತಿದೆ ಎಂಬ ಸುದ್ದಿ ಹೆಚ್ಚಳವಾಗುತ್ತಿರುವ ಪರಿಣಾಮ, ನಮ್ಮಲ್ಲಿಯೂ ವೈರಸ್ ಹರಡುವ ಆತಂಕ ಎದುರಾಗಿದೆ. ಆದರೆ, ಭಯಕ್ಕೆ ಒಳಗಾಗದೆ, ಜಾಗ್ರತೆ ವಹಿಸುವಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ನಿರ್ದೆಶನ ನೀಡಿದೆ.

ವೈರಸ್ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರಗಳು ತಿಳಿವಳಿಕೆ ಪತ್ರವನ್ನು ಬಿಡುಗಡೆ ಮಾಡಿದೆ. ಆ ಪ್ರಕಾರ ಯಾರೂ ಕೂಡ ಆತಂಕಕ್ಕೆ ಒಳಗಾಗುವುದು ಬೇಡ ಎಂದು ತಿಳಿಸಿದೆ. ಆದ್ದರಿಂದ ಈ ಹಿಂದೆ ಪಾಲಿಸುತ್ತಿದ್ದ ಎಸ್‌ಒಪಿಯನ್ನು ಪಾಲಿಸುವುದು ಒಳ್ಳೆಯದು ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ತಿಳಿಸಿದ್ದಾರೆ.
ಕೆಮ್ಮು, ನೆಗಡಿ, ಜ್ವರ ಇದ್ದಲ್ಲಿ ವಿಶ್ರಾಂತಿ ಪಡೆದುಕೊಳ್ಳುವುದು ಮತ್ತು ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ. ಅನಾರೋಗ್ಯಕ್ಕೆ ಒಳಗಾದವರು ತರಗತಿಗೆ ಬರುವಾಗ ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸ್ ಮಾಡಿಸುವುದು, ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಿಳಿಸಿದ್ದಾರೆ.