ಲೋಕಸಭಾ ಚುನಾವಣೆಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್‌ ಕೇಳಿದ್ದೇನೆ: ಎಚ್‌ ಎಂ ರೇವಣ್ಣ

ರಾಯಚೂರು: ರಾಜ್ಯದಲ್ಲಿ ಕಾಂಗ್ರೆಸ್‌ ದಳ ಸಮ್ಮಿಶ್ರವಾಗಿ ಸರಕಾರ ನಡೆಯುತ್ತಿದೆ. ಜಾತ್ಯತೀತ ಚಿಂತನೆ ಹಾಗೂ ರಾಜ್ಯದ ಹಿತದೃಷ್ಟಿಯಿಂದ ನಾವು ಸಮ್ಮಿಶ್ರ ಸರ್ಕಾರ ಮಾಡಿದ್ದೇವೆ. ಕೊಮುವಾದಿ ಬಿಜೆಪಿಯನ್ನು ದೂರ ಇಡುವುದು ನಮ್ಮ ಉದ್ದೇಶ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಎಂ.ರೇವಣ್ಣ ಹೇಳಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲೂ ನಾವು ಒಂದಾಗುತ್ತಿದ್ದೇವೆ. ಮೋದಿಯವರು ಜನಪರ ಕಾರ್ಯಕ್ರಮಗಳನ್ನು ಮಾಡುವುದರಲ್ಲಿ ವಿಫಲರಾಗಿದ್ದಾರೆ. ಮನ್ ಕಿ ಬಾತ್‌ನಿಂದ ಜನರ ಹೊಟ್ಟೆ ತುಂಬುವುದಿಲ್ಲ. ಮುಂದಿನ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಮುಂದಿನ ದಿನಗಳಲ್ಲಿ ರಾಷ್ಟ್ರದಿಂದ ಬಿಜೆಪಿಯನ್ನು ಹೊರಗಿಡಬೇಕು. ಹಾಗಾಗಿ ಮಹಾಘಟಬಂಧನ್ ಮಾಡಿಕೊಂಡಿದ್ದೇವೆ ಎಂದರು.

ಮೀಸಲಾತಿ ಚುನಾವಣೆ ಗಿಮಿಕ್‌

ಬಿಜೆಪಿಯವರು ಯಾವತ್ತೂ ಮೀಸಲಾತಿ ಪರವಾಗಿದ್ದವರಲ್ಲ. ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವ ಹಾಗೆ ಇಂದಿನ ಪರಿಸ್ಥಿತಿ ಇದೆ. ಮೋದಿ ಮೀಸಲಾತಿ ಯೋಜನೆ ಚುನಾವಣಾ ಗಿಮಿಕ್. ಇಷ್ಟು ಸುಳ್ಳು ಹೇಳುವ ಪ್ರಧಾನ ಮಂತ್ರಿ ಭಾರತದ ಇತಿಹಾಸದಲ್ಲೇ ಕಂಡಿಲ್ಲ. ಅವರು ಯಾವಾಗಲೂ ಪ್ರಧಾನಿ ಹುದ್ದೆಗೆ ಘನತೆ ತರುವಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಿದರು.

ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಆಸಕ್ತಿ

ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆ ವಿಚಾರವಾಗಿ ಇನ್ನೂ ತೀರ್ಮಾನ ಆಗಿಲ್ಲ. ನಮ್ಮ ಹೈಕಮಾಂಡ್ ಹಾಗೂ ಜಾತ್ಯತೀತ ಜನತಾದಳದ ನಾಯಕರು ತೀರ್ಮಾನ ಮಾಡುತ್ತಾರೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ಆಸಕ್ತಿ ನನಗಿದೆ. ರಾಜಕೀಯದಲ್ಲಿ ಸಕ್ರಿಯವಾಗಿರಲು ಟಿಕೆಟ್ ಕೇಳಿದ್ದೇನೆ. ರಾಹುಲ್ ಆದೇಶದ ಮೇರೆಗೆ ಬೇರೆ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ರಾಜಕೀಯ ಜೀವನ ಪ್ರಾರಂಭಿಸಿದ್ದೇ ಕಾಂಗ್ರೆಸ್​ನಿಂದ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ ಎಂದರು. (ದಿಗ್ವಿಜಯ ನ್ಯೂಸ್)