ನಗರಕ್ಕೆ ಅಮೃತ ನಗರೋತ್ಥಾನ

3 Min Read
ನಗರಕ್ಕೆ ಅಮೃತ ನಗರೋತ್ಥಾನ
oplus_34

ಶಿವಾನಂದ ಹಿರೇಮಠ, ಗದಗ
ಮರು ಟೆಂಡರ್​ ಪ್ರಕ್ರಿಯೆ, ತಾಂತ್ರಿಕ ಕಾರಣ, ರಾಜಕೀಯ ಒತ್ತಡ, ಚುನಾವಣೆಗಳ ನೀತಿ ಸಂಹಿತೆ ಸೇರಿದಂತೆ ವಿವಿಧ ಕಾರಣಗಳಿಂದ ಕಳೆದ ಎರಡೂ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಾಲ್ಕನೇ ಹಂತದ ನಗರೋತ್ಥಾನ (ಚರಂಡಿ ಮತ್ತು ರಸ್ತೆ ಅಭಿವೃದ್ಧಿ) ಕಾಮಗಾರಿಗಳಿಗೆ ಕೊನೆಗೂ ಶುಕ್ರದೆಸೆ ಕೂಡಿ ಬಂದಿದೆ. ಒಟ್ಟಾರೆ 34 ಕೋಟಿಯ 4ನೇ ಹಂತದ ನಗರೋತ್ಥಾನ ಯೋಜನೆಯಲ್ಲಿ ಮಂಗಳವಾರ 18.24 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ನಗರಸಭೆ ಆವರಣದಲ್ಲಿ ಸಚಿವ ಎಚ್​.ಕೆ. ಪಾಟೀಲ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಸಂಸದ ಬಸವರಾಜ ಬೊಮ್ಮಾಯಿ ಉಪಸ್ಥಿತಿ ಇರಲಿದ್ದಾರೆ.
ನಾಲ್ಕನೇ ಹಂತದ ಯೋಜನೆಯ 34 ಕೋಟಿಯಲ್ಲಿ ನಿಯಮದಂತೆ 8.19 ಕೋಟಿ (ಶೇ. 24.10) ಅನುದಾನ ಎಸ್ಸಿಪಿ, ಟಿಎಸ್​ಪಿಗೆ ಅನುದಾನ ಮೀಸಲಿಡಲಾಗಿತ್ತು. ಅದರಲ್ಲಿ ಪೌರಕಾಮಿರ್ಕರಿಗೆ ವಸತಿ, ಎಸ್ಸಿ, ಎಸ್ಟಿ ಸಮುದಾಯದ ಅಭಿವೃದ್ಧಿ ಮತ್ತು ವೈಯಕ್ತಿಯ ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಆರಂಭವಾಗಿವೆ. ವಸತಿ ಯೋಜನೆಗೆ ಕೆಲವರನ್ನು ಆಯ್ಕೆ ಮಾಡಲಾಗಿದೆ. 5 ಕೋಟಿ ಮೊತ್ತದ ಒಳಗಿನ ಯೋಜನೆಗಳ ಅನುಷ್ಠಾನವು ಜಿಲ್ಲಾಧಿಕಾರಿ ವ್ಯಾಪ್ತಿಯಲ್ಲೇ ಜರಗುವುದರಿಂದ ವಿವಿಧ ಕಾಮಗಾರಿಗಳು ಈಗಾಗಲೇ ಅನುಷ್ಠಾನಗೊಂಡಿವೆ. ಆದರೆ, ಯೋಜನೆಯಲ್ಲಿ ರಸ್ತೆ ಮತ್ತು ಚರಂಡಿ ಟಕದ ಕಾಮಗಾರಿಗಳ ಒಟ್ಟಾರೆ ಮೊತ್ತ 5 ಕೋಟಿಗೂ ಅಧಿಕ ಇದ್ದ ಕಾರಣ ಸಚಿವ ಸಂಪುಟದ ಅನುಮೋದನೆ ಅಗತ್ಯವಿತ್ತು. ಹೀಗಾಗಿ ಈ ಕಾಮಗಾರಿಗಳ ಆರಂಭಕ್ಕೆ ಶುಕ್ರದೆಸೆ ಕೂಡಿ ಬಂದಿರಲಿಲ್ಲ. ಈಗ ನಾನಾ ವಿಗ್ನಗಳು ಕೊನೆಯಾಗಿ ಮಂಗಳವಾರ ಕಾಮಗಾರಿ ಆರಂಭವಾಗಲಿವೆ.
ಯಾವಾಗ ಅನುಮೋದನೆ:
ಸಂಸದ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಜು.19, 2022 ರಂದು ನಡೆದ ಸಭೆಯಲ್ಲಿ ಗದಗ&ಬೆಟಗೇರಿ ನಗರಸಭೆಯ ನಗರೋತ್ಥಾನ ನಾಲ್ಕನೇ ಹಂತದ 34 ಕೋಟಿ ವೆಚ್ಚದ ಕ್ರೀಯಾ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಆ.30, 2022ರಂದು ಸರ್ಕಾರದಿಂದ ಆದೇಶವು ಆಗಿತ್ತು. ತದ ನಂತರ ಎರಡೂ ಬಾರಿ ಟೆಂಡರ್​ ಪ್ರಕ್ರಿಯೆ ರದ್ದು ಗೊಂಡಿತು. ವಿಧಾನಸಭೆ ಚುನಾವಣೆಯಲ್ಲಿ ನೀತಿ ಸಂಹಿತೆ ಜಾರಿ ನಂತರ ಟೆಂಡರ್​ ಪ್ರಕ್ರಿಯೆ ಸ್ಥಗಿತಗೊಂಡಿತು. 2023ರಲ್ಲಿ ರಾಜ್ಯದಲ್ಲಿ ಸರ್ಕಾರ ಬದಲಾಗಿ, ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳಿಗೆ ಆಥಿರ್ಕ ಸಂಪನ್ಮೂಲ ಕ್ರೂಢಿಕರಣ ಸವಾಲಾಗಿತ್ತು. ಹಾಗಾಗಿ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ವಿನಿಯೋಗಿಸುವುದು ಆರಂಭದಲ್ಲಿ ಕಷ್ಟವಾಗಿತ್ತು. ಎಚ್​.ಕೆ. ಪಾಟೀಲ ಸಚಿವರಾದ ನಂತರ 4ನೇ ಹಂತದ ನಗರೋತ್ಥಾನ ಯೋಜನೆಗೆ ಟೆಂಡರ್​ ಪ್ರಕ್ರಿಯೆ ಪೂರ್ಣಗೊಳಿಸಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

See also  ಊರೂರು ಸುತ್ತಿ ನುಗ್ಗೆಕಾಯಿ ಮಾರಾಟ

ಯಾವ ಕಾಮಗಾರಿಗಳಿಗೆ ಗುದ್ದಲಿ ಪೂಜೆ:
ನಗರೋತ್ಥಾನದ 34 ಕೋಟಿ ಮೊತ್ತದ ಯೋಜನೆಯಲ್ಲಿ ಎಸ್ಸಿಪಿ, ಟಿಎಸ್ಪಿಯ ಶೇ.24.10 ರಷ್ಟು ಮೊತ್ತದ ಸಮುದಾಯ ಮತ್ತು ವೈಯಕ್ತಿಯ ವಿವಿಧ ಯೋಜನೆಗಳು ಈಗಾಗಲೇ ಆರಂಭವಾಗಿದೆ. ಪ್ರಸ್ತುತವಾಗಿ 13.09 ಕೋಟಿ ಮೊತ್ತದ (ಯೋಜನಾ ಮೊತ್ತದ ಶೇ.70 ರಷ್ಟು ಅನುದಾನ ಮೀರದಂತೆ) ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ, ಇತರೇ ಬಡ ಜನರಿಗಾಗಿ ಮಿಸಲಿಡಬೇಕಾದ(ಯೋಜನಾ ಮೊತ್ತದ ಶೇ.7.25 ಮೊತ್ತ) ಅನುದಾನದಲ್ಲಿ ವೈಯಕ್ತಿಕ ಯೋಜನೆ ಹೊರತುಪಡಿಸಿ ಸಮುದಾಯ ಅಭಿವೃದ್ಧಿಗೆ 87 ಲಕ್ಷ ಮೊತ್ತದ ಕಾಮಗಾರಿಗಳಿಗೆ ಹಾಗೂ ಚರಂಡಿ ಅಭಿವೃದ್ಧಿಯ 2.96 ಕೋಟಿ ಮೊತ್ತದ ಯೋಜನೆಗಳಿಗೆ ಮಂಗಳವಾರ ಗುದ್ದಲಿ ಪೂಜೆ ನರೆವೇರಲಿದೆ.


ನಗರೋತ್ಥಾನ ಯೋಜನೆಯಲ್ಲಿ ನಗರಸಭೆ ಸದಸ್ಯರ ವಾರ್ಡ್​ ವಾರು ಕಾಮಗಾರಿಗಳ ಪಟ್ಟಿ ಹಾಗೂ ಸ್ಥಳಿಯ ಶಾಸಕರ ವಿವೇಚನೆಗೆ ಒಳಪಟ್ಟ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಅಂತಿಂಗೊಳಿಸಲಾಗುತ್ತದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಸಿ. ಪಾಟೀಲ ಉಸ್ತುವಾರಿ ಸಚಿವರು ಆಗಿದ್ದರು. ಅಂದಿನ ಶಾಸಕರಾಗಿದ್ದ ಸಚಿವ ಎಚ್​.ಕೆ. ಪಾಟೀಲ ಶಿಾರಸ್ಸಿನ ಮೇರೆಗೆ ಉಸ್ತುವಾರಿ ಸಚಿವರಾಗಿದ್ದ ಬಿ.ಸಿ. ಪಾಟೀಲ ಕಾಮಗಾರಿ ಪಟ್ಟಿಗೆ ಅನುಮೋದನೆ ನೀಡಿದ್ದರು. 2023ರ ವಿಧಾನಸಭೆ ಚುನಾವಣೆ ಸಮಯದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಕ್ರೀಯಾ ಯೋಜನೆಗೆ ಅನುಮೋದನೆ ನೀಡಿತ್ತು.

ಒಟ್ಟಾರೆ 34 ಕೋಟಿಯಲ್ಲಿ ಯಾರಿಗೆ ಎಷ್ಟೆಷ್ಟು ಅನುದಾನ?
ಎಸ್ಪಿಪಿ/ಟಿಎಸ್ಪಿಯಲ್ಲಿ(ಶೇ.24.10): 8.19 ಕೊಟಿ
ಇತರೇ ಬಡ ಜನರಿಗೆ(ಶೇ.7.25): 2.46 ಕೋಟಿ
ವಿಕಲಚೇತನರಿಗೆ(ಶೇ.5): 1.70 ಕೋಟಿ
ರಸ್ತೆ ಕಾಮಕಾರಿಗಳಿಗೆ(ಶೇ.70 ಮೀರದಂತೆ): 13.09 ಕೋಟಿ
ಚರಂಡಿ ಅಭಿವೃದ್ಧಿ: 2.96 ಕೋಟಿ
ಇತರೆ ಅಭಿವೃದ್ಧಿ: 5.58 ಕೋಟಿ

See also  ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

ಕೋಟ್​:
ಸಿಎಂ ಆಗಿದ್ದ ಸಂದರ್ಭದಲ್ಲಿ ನಗರೋತ್ಥಾನ ಯೋಜನೆಯ ಕ್ರೀಯಾ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಅದೇ ಕಾಮಗಾರಿಗಳಿಗೆ ಇಂದು ಭೂಮಿ ಪೂಜೆ ನೆರವೇರಿಸುತ್ತಿರುವುದು ಸಂತಸ ತಂದಿದೆ.
ಬಸವರಾಜ ಬೊಮ್ಮಾಯಿ, ಸಂಸದ

ಕೋಟ್​:
ನಗರದ ಅಭಿವೃದ್ಧಿಗೆ ಕಾಂಗ್ರೆಸ್​ ಸರ್ಕಾರ ಅನುದಾನ ವಿನಿಯೋಗಿಸುತ್ತಿದೆ. ಬಡ, ಹಿಂದೂಳಿದ ಜನರ ಅಭಿವೃದ್ಧಿ ಮತ್ತು ಅವರ ಜೀವನಶೈಲಿ ಉತ್ತಮಗೊಳಿಸಲು ನಗರೋತ್ಥಾನ ಯೋಜನೆಗಳು ಪೂರಕವಾಗಿವೆ.
ಎಚ್​.ಕೆ. ಪಾಟೀಲ, ಸಚಿವ

Share This Article