ಮತ್ತಷ್ಟು ಆತ್ಮಾಹುತಿ ದಾಳಿ ನಡೆಸಲಾಗುವುದು: ಹಿಜ್ಬುಲ್​ ಮುಜಾಹಿದೀನ್​ ಎಚ್ಚರಿಕೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆದು ಒಂದು ವಾರ ಪೂರೈಸುವ ಮುನ್ನವೇ ರಾಜ್ಯದಲ್ಲಿ ಮತ್ತಷ್ಟು ಆತ್ಮಾಹುತಿ ದಾಳಿ ನಡೆಸಲಾಗುವುದು ಎಂದು ಹಿಜ್ಬುಲ್​ ಮುಜಾಹಿದೀನ್​ ಉಗ್ರ ಸಂಘಟನೆ ಬೆದರಿಕೆ ಹಾಕಿದೆ.

ಕಾಶ್ಮೀರ ಮೂಲದ ಹಿಜ್ಬುಲ್​ ಮುಜಾಹಿದೀನ್​ ಸಂಘಟನೆ ಇದೇ ಮೊದಲ ಬಾರಿಗೆ ಆತ್ಮಾಹುತಿ ದಾಳಿ ನಡೆಸುವ ಬೆದರಿಕೆ ಹಾಕಿದೆ. ಉಗ್ರ ಸಂಘಟನೆಯ ಕಮಾಂಡರ್​ ರಿಯಾಜ್​ ನಾಯ್ಕೋ 17 ನಿಮಿಷಗಳ ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, ಸೇನೆಯ ಮೇಲೆ ಆತ್ಮಾಹುತಿ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದಾನೆ.

ನಾವು ನಮ್ಮ ಜೀವವನ್ನು ತ್ಯಾಗ ಮಾಡಲು ಸಿದ್ಧರಿದ್ದೇವೆ. ನಾವು ಶರಣಾಗತರಾಗುವುದಕ್ಕಿಂತ ಸಾವನ್ನು ಆಹ್ವಾನಿಸುತ್ತೇವೆ. 15 ವರ್ಷದ ಬಾಲಕನೊಬ್ಬ ತನ್ನ ದೇಹಕ್ಕೆ ಸ್ಫೋಟಕಗಳನ್ನು ಕಟ್ಟಿಕೊಂಡು ಸೇನೆಯ ವಾಹನಗಳ ಮೇಲೆ ದಾಳಿ ನಡೆಸುವ ಸಮಯ ದೂರವಿಲ್ಲ. ನಿಮ್ಮ ಸೇನೆ ಇಲ್ಲಿ ಇರುವ ವರೆಗೆ ನೀವು ಅಳುತ್ತಲೇ ಇರುತ್ತೀರಿ. ನಿಮ್ಮ ಸೈನಿಕರ ಮೃತದೇಹಗಳನ್ನು ಹೊತ್ತ ಶವಪೆಟ್ಟಿಗೆಗಳು ಇಲ್ಲಿಂದ ಹೊರ ಹೋಗುತ್ತಲೇ ಇರುತ್ತವೆ. ನಾವು ಸಾಯಲು ಸಿದ್ಧರಿದ್ದೇವೆ, ಆದರೆ ನಾವು ನಿಮ್ಮನ್ನು ಇಲ್ಲಿ ಬದುಕಲು ಬಿಡುವುದಿಲ್ಲ ಎಂದು ರಿಯಾಜ್​ ನಾಯ್ಕೋ ಆಡಿಯೋ ಸಂದೇಶದಲ್ಲಿ ತಿಳಿಸಿದ್ದಾನೆ.

ಕೇಂದ್ರ ಸರ್ಕಾರ ಕಾಶ್ಮೀರಿ ಜನರ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಸೈನಿಕರ ಮೇಲೆ ಆತ್ಮಾಹುತಿ ದಾಳಿ ನಡೆಸಿದಾತ ಕಾಶ್ಮೀರಿ ಯುವಕ. ಸೈನಿಕರಿಂದ ಆತನ ಮೇಲೆ ನಡೆದ ದೌರ್ಜನ್ಯಗಳಿಗೆ ಪ್ರತಿಯಾಗಿ ಆತ ಈ ದಾಳಿ ನಡೆಸಿದ್ದಾನೆ. ಪ್ರಪಂಚದ ಯಾವುದೇ ಶಕ್ತಿ ಈ ವಿಧದ ದಾಳಿಗಳನ್ನು ತಡೆಯಲು ಸಾಧ್ಯವಿಲ್ಲ. ಕಾಶ್ಮೀರದಲ್ಲಿ ಸೇನೆ ಇರುವವರೆಗೆ ಸೈನಿಕರ ಮೇಲೆ ದಾಳಿ ನಡೆಯಲಿದೆ ಎಂದು ರಿಯಾಜ್​ ತಿಳಿಸಿದ್ದಾನೆ. (ಏಜೆನ್ಸೀಸ್​)