ಕೊಕ್ಕರ್ಣೆಯಲ್ಲಿ ಹೈಟೆಕ್ ಕರ್ನಾಟಕ ಪಬ್ಲಿಕ್ ಸ್ಕೂಲ್

ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆ

ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ಹೈಟೆಕ್ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಜೆಕ್ಟ್‌ಗೆ ಕೊಕ್ಕರ್ಣೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜು ಕೊಕ್ಕರ್ಣೆ ಮತ್ತು ಪ್ರೌಢಶಾಲಾ ವಿಭಾಗ ಆಯ್ಕೆಯಾಗಿದೆ. ಕಾಮಗಾರಿಗಳು ನಡೆದು ಮುಂದಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ಕೈಬೀಸಿ ಕರೆಯುತ್ತಿದೆ.

ಶಾಲಾ ಪ್ರಾರಂಭದಲ್ಲಿ ಪ್ರಸ್ತುತ ಇರುವ ಶಾಲೆಯಲ್ಲೇ ತರಗತಿಗಳು ನಡೆಯಲಿದ್ದು, ಶಾಲಾ ಕಟ್ಟಡಗಳಿಗೆ ಬಣ್ಣ ಬಳಿಯುವುದು, ರಿಪೇರಿ ಮೊದಲಾದ ಕಾರ್ಯ ನಡೆದಿದೆ. ಮೇ ಅಂತ್ಯದಲ್ಲಿ ಶಾಲಾ ಪ್ರಾರಂಭಕ್ಕೆ ಅಣಿಯಾಗುತ್ತಿದೆ. ಕೊಕ್ಕರ್ಣೆಯಲ್ಲಿ ಎರಡು ಶಾಲೆಗಳು ಹತ್ತಿರದಲ್ಲಿಯೇ ಇರುವುದರಿಂದ ಶಾಲೆ ನಿರ್ಮಾಣಕ್ಕೆ ಸರ್ಕಾರ ಈ ವಿದ್ಯಾಸಂಸ್ಥೆಯನ್ನು ಆಯ್ದುಕೊಂಡಿದ್ದು ಪಾಲಕರು, ವಿದ್ಯಾಭಿಮಾನಿಗಳಲ್ಲಿ ಸಂತಸ ತಂದಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ರಾಜ್ಯ ಯೋಜನಾ ನಿರ್ದೇಶಕರು ಮತ್ತು ಸಂಬಂಧಪಟ್ಟ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮ್ಮತಿ ಸೂಚಿಸಿದ್ದರು. ಕರ್ನಾಟಕ ಪಬ್ಲಿಕ್ ಸ್ಕೂಲ್ ನಾಮಫಲಕ ಅಳವಡಿಕೆ ನಡೆದಿದೆ.

ಕೆಪಿಎಸ್ ವಿಶೇಷ

  • ಸಂಪೂರ್ಣ ಉಚಿತ ಶಿಕ್ಷಣ
  • ಶಾಲಾ ವಾಹನದ ವ್ಯವಸ್ಥೆ
  • ವಿಷಯವಾರು ಅಧ್ಯಾಪಕರು
  • ಕನ್ನಡ-ಆಂಗ್ಲ ಮಾಧ್ಯಮದಲ್ಲಿ ಬೋಧನೆ
  • ಐಡಿ ಕಾರ್ಡ್
  • ಸಿಸಿ ಕ್ಯಾಮರಾ ಅಳವಡಿಕೆ

ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತರಗತಿ ಆರಂಭವಾಗುತ್ತದೆ. ಸುಮಾರು 3000ಕ್ಕೂ ಅಧಿಕ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ.
| ಭಾಸ್ಕರ ಪೂಜಾರಿ,
ಪ್ರಭಾರ ಮುಖ್ಯಶಿಕ್ಷಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಕ್ಕರ್ಣೆ