ಮುದ್ದೇಬಿಹಾಳ: ತಾಲೂಕಿನ ಕೃಷ್ಣಾ ನದಿ ತೀರದ ಅಮರಗೋಳ ಗ್ರಾಮ ವ್ಯಾಪ್ತಿಯಲ್ಲಿ ಸರ್ಕಾರದ ಅನುಮತಿ ಅಥವಾ ರಾಯಲ್ಟಿ ಸಂದಾಯದ ದಾಖಲೆ ಇಲ್ಲದೆ ಕಳ್ಳತನದಿಂದ ಅಕ್ರಮವಾಗಿ ಕಪ್ಪು ಎರೆ ಮಣ್ಣನ್ನು ಮಾರುವ ಉದ್ದೇಶದಿಂದ ಮುಂದಾಗಿದ್ದ ತಂಡದ ಮೇಲೆ ಪಿಎಸ್‌ಐ ಸಂಜಯ್ ತಿಪ್ಪರಡ್ಡಿ ನೇತೃತ್ವದ ತಂಡ ಮಂಗಳವಾರ ದಾಳಿ ನಡೆಸಿ ಮೂರು ಟಿಪ್ಪರ್, ಒಂದು ಹಿಟಾಚಿ ಯಂತ್ರ ವಶಪಡಿಸಿಕೊಂಡಿದೆ.
ಅಲ್ಲದೆ, ಅಕ್ರಮದಲ್ಲಿ ತೊಡಗಿದ್ದ ಮುದ್ದೇಬಿಹಾಳ ತಾಲೂಕು ಢವಳಗಿಯ ರಮೇಶ ಸಂಗಣ್ಣ ಭೀರಗೊಂಡ, ಅರಸನಾಳದ ಮಹೇಶ ಸಿದ್ದಪ್ಪ ಮೂಲಿಮನಿ, ಮಲ್ಲೇಶ ಸಿದ್ದಪ್ಪ ಕೇಸಾಪುರ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾದ ಮಾಳಿಂಗರಾಯ ಸೋಮಣ್ಣ ಐದುಬಾವಿ, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ಮರಟಗೇರಿಯ ರೇಣುಕಾ ಹಣಮಂತಪ್ಪ ಯರಜೇರಿ, ಹಣಮಂತಪ್ಪ ಯರಜೇರಿ ವಿರುದ್ಧ ಬಿಎನ್‌ಎಸ್ ಕಾಯ್ದೆ 303ರ ಅಡಿಯಲ್ಲಿ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಕ್ರಮ ಮಣ್ಣು ಅಗೆತ, ಸಾಗಾಟ ತಡೆಯುವಂತೆ ಆಗ್ರಹಿಸಿ ತಾಲೂಕು ಆಡಳಿತ ಸೌಧ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣ, ಯುವಜನ ಸೇನೆ ಸಂಘಟನೆ ಪದಾಧಿಕಾರಿಗಳು, ಸದಸ್ಯರು ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡ ಮಂಗಗಳ ್ಲೆಕ್ಸ್ ಹಿಡಿದು ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದಲ್ಲದೆ, ಒಂದು ದಿನದ ಸಾಂಕೇತಿಕ ಧರಣಿ ನಡೆಸಿದ್ದ ಮತ್ತು ಎರಡು ದಿನಗಳ ಹಿಂದೆ ವಿಜಯಪುರ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಆನಂದ ಠಕ್ಕನವರ್ ಅವರು ಅಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತರಾಗಿ ಈ ಕ್ರಮ ಕೈಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
