ದೇವೇಗೌಡರ ಸಾಧನೆಯನ್ನು ಇತಿಹಾಸವೇ ತಿಳಿಸುತ್ತದೆ, ಅವರ ಗೆಲುವು ಸೂರ್ಯನಷ್ಟೇ ಸತ್ಯ ಎಂದ್ರು ಜಿ.ಪರಮೇಶ್ವರ್​

ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​-ಜೆಡಿಎಸ್​ ಒಂದಾಗಿ ಮುನ್ನಡೆಯಲು ರಾಹುಲ್​ ಗಾಂಧಿ ಹೇಳಿದ್ದಾರೆ. ಅದರಂತೆ ನಡೆದುಕೊಂಡು ಜಾತ್ಯತೀತವಾಗಿ ಬದುಕಲು ಸೈದ್ಧಾಂತಿಕ ಹೋರಾಟ ನಡೆಸುತ್ತೇವೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್​ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿ, ಎಚ್​.ಡಿ.ದೇವೇಗೌಡರು ಈ ದೇಶಕಂಡ ಅಪರೂಪದ ರಾಜಕಾರಣಿ. ಒಂದು ಭಾಗದಲ್ಲಿ ನರೇಂದ್ರ ಮೋದಿಯವರು ಇದ್ದರೆ ಮತ್ತೊಂದು ಭಾಗದಲ್ಲಿ ರಾಹುಲ್​ ಗಾಂಧಿ, ದೇವೇಗೌಡರು ಇದ್ದಾರೆ. ದೇಶದ ಸಮಸ್ಯೆಗಳನ್ನು ಗಮನಿಸಿದ ದೇವೇಗೌಡರು ಈ ಇಳಿವಯಸ್ಸಿನಲ್ಲೂ ಸ್ಪರ್ಧಿಸುತ್ತಿದ್ದಾರೆ. ಅವರನ್ನು ಕಾಂಗ್ರೆಸ್​ನವರು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ತಿಳಿಸಿದರು.

ಸೂರ್ಯ ಎಷ್ಟು ಸತ್ಯವೋ ದೇವೇಗೌಡರ ಗೆಲುವೂ ಅಷ್ಟೇ ಸತ್ಯ. ಮೋದಿ ಹೇಳಿರುವಷ್ಟು ಸುಳ್ಳು ಇನ್ಯಾರೂ ಹೇಳಿಲ್ಲ. ದೇವೇಗೌಡರ ಸಾಧನೆಯನ್ನು ನಾವು ಹೇಳಬೇಕಿಲ್ಲ. ಇತಿಹಾಸವೇ ತಿಳಿಸುತ್ತದೆ ಎಂದು ಹೇಳಿದರು