35 ವರ್ಷದ ಬಳಿಕ ಮರುಕಳಿಸಿದ ಇತಿಹಾಸ

|ಗೋಪಾಲಕೃಷ್ಣ ಪಾದೂರು
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಚುನಾವಣೆಯ ಈ ಬಾರಿಯ ಫಲಿತಾಂಶ 35 ವರ್ಷದ ಹಿಂದಿನ ಚುನಾವಣೆ ಫಲಿತಾಂಶಕ್ಕೆ ನೇರ ಹೋಲಿಕೆಯಾಗುತ್ತಿದೆ. 1984ರಲ್ಲಿ ಕಾಂಗ್ರೆಸ್‌ನ ಆಸ್ಕರ್ ಫರ್ನಾಂಡಿಸ್ ಶೇ.62.37 ಮತಗಳಿಕೆ ಮೂಲಕ ಗೆಲುವು ಸಾಧಿಸಿದ್ದರು. ಈ ಬಾರಿ ಬಿಜೆಪಿಯ ಶೋಭಾ ಕರಂದ್ಲಾಜೆ ಶೇ.62.46 ಮತ ಗಳಿಸಿ ಪ್ರತಿಸ್ಪರ್ಧಿ ಪ್ರಮೋದ್ ಮಧ್ವರಾಜ್‌ರನ್ನು ಮಣಿಸಿದ್ದಾರೆ.

1980ರಲ್ಲಿ ಸ್ಥಾಪನೆಯಾದ ಭಾರತೀಯ ಜನತಾ ಪಕ್ಷಕ್ಕೆ 1984ರಲ್ಲಿ ಮೊದಲ ಲೋಕಸಭಾ ಚುನಾವಣೆ. ಇಂದಿರಾ ಗಾಂಧಿ ಹತ್ಯೆ ನಡೆದು ದೇಶವ್ಯಾಪಿ ಆಕ್ರೋಶ ಭುಗಿಲೆದ್ದ ಸಮಯ. ಎಲ್ಲೆಡೆ ಕಾಂಗ್ರೆಸ್ ಪರ ಅಲೆ ತೀವ್ರವಾಗಿತ್ತು. ಆಗ ಆಸ್ಕರ್ ಫರ್ನಾಂಡಿಸ್ 2,87,412 (ಶೇ.62.37) ಮತ ಪಡೆದು ಗೆದ್ದಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಎಸ್.ಹೆಗ್ಡೆ 1,45,076(ಶೇ.31.48) ಮತಗಳೊಂದಿಗೆ ಸೋಲನುಭವಿಸಿದ್ದರು. ಈ ಬಾರಿ ಫಲಿತಾಂಶ ತಿರುವು-ಮುರುವಾಗಿದ್ದು, ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ 3,69,317 (ಶೇ.32.09) ಮತ ಗಳಿಸಿದ್ದಾರೆ.

ಕಾಂಗ್ರೆಸ್ ಮತಪ್ರಮಾಣ ಇಳಿಕೆ: 5 ವರ್ಷ ಬಳಿಕ 1989ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳಿಕೆ ಪ್ರಮಾಣ ಶೇ.53.54ಕ್ಕೆ ಇಳಿಕೆಯಾಗಿದ್ದರೂ ಆಸ್ಕರ್ ಫರ್ನಾಂಡಿಸ್ 3,13,849 ಮತ ಗಳಿಸಿ ಪ್ರತಿಸ್ಪರ್ಧಿ ಜನತಾದಳದ ಎಂ.ಸಂಜೀವ ವಿರುದ್ಧ 1,52,193 ಮತಗಳ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕರಂಬಳ್ಳಿ ಸಂಜೀವ ಶೆಟ್ಟಿ ಮೂರನೇ ಸ್ಥಾನ ಪಡೆದು 89,157 ಮತಗಳಿಸಿದ್ದರು.

ಬಿಜೆಪಿ ಶಕ್ತಿ ವೃದ್ಧಿ: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ ದೇಶವ್ಯಾಪಿ ರಾಮರಥ ಯಾತ್ರೆ ಪಾರಂಭಿಸಿದ್ದರು. ಇದರ ಪರಿಣಾಮವಾಗಿ 1991ರ ಚುನಾವಣೆಯಲ್ಲಿ ಬಿಜೆಪಿ 2ನೇ ಸ್ಥಾನ ಪಡೆದಿತ್ತು. ಆಸ್ಕರ್ ಗೆಲುವು ಸಾಧಿಸಿದರೂ ಕಾಂಗ್ರೆಸ್ ಮತಪ್ರಮಾಣ ಶೇ.47.91ಕ್ಕೆ ಕುಗ್ಗಿತ್ತು. ಬಿಜೆಪಿಯಿಂದ ರುಕ್ಮಯ್ಯ ಪೂಜಾರಿ ಶೇ.29.94 ಹಾಗೂ ಜನತಾದಳದ ಸಭಾಪತಿ ಶೇ.21.30 ಮತ ಗಳಿಸಿದ್ದರು. 1996ರಲ್ಲಿ ಬಿಜೆಪಿಯ ಐಎಂ ಜಯರಾಮ ಶೆಟ್ಟಿ 2,33,478 (ಶೇ.36.97) ಮತ ಗಳಿಸಿ ಕಾಂಗ್ರೆಸ್‌ನ ಆಸ್ಕರ್ (ಶೇ.37.36) ಎದುರು 2,454 ಮತಗಳ ಅಂತರದಲ್ಲಿ ಸೋಲುಂಡಿದ್ದರು. ಇದೇ ಸಂದರ್ಭ ಜನತಾದಳದಿಂದ ಸ್ಪರ್ಧಿಸಿದ್ದ ಕೆ.ವಸಂತ ಬಂಗೇರ 1,47,293 ಮತ ಗಳಿಸಿದ್ದು, ಕಾಂಗ್ರೆಸ್ ಗೆಲುವಿನ ಅಂತರ ಕುಗ್ಗಿಸಿತ್ತು.

ಮೊದಲ ಗೆಲುವು: 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಎದ್ದಿದ್ದ ಅನುಕಂಪದ ಅಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿ ಬಿಜೆಪಿ ಖಾತೆ ತೆರೆದಿತ್ತು. ಬಿಜೆಪಿಯ ಐ.ಎಂ. ಜಯರಾಮ ಶೆಟ್ಟಿ 3,41,466 (ಶೇ.50.83) ಮತ ಪಡೆದು ಕಾಂಗ್ರೆಸ್‌ನ ಆಸ್ಕರ್ ಫರ್ನಾಂಡಿಸ್‌ರನ್ನು (ಪಡೆದ ಮತ 2,84,898) 56,568 ಮತಗಳ ಅಂತರದಿಂದ ಸೋಲಿಸಿ ಲೋಕಸಭೆ ಪ್ರವೇಶಿಸಿದ್ದರು.

ಮತ್ತೆ ಹಾವು ಏಣಿ ಆಟ: 1998ರ ಬಿಜೆಪಿ ಗೆಲುವಿನ ಖುಷಿ ಹೆಚ್ಚು ಸಮಯವಿರಲಿಲ್ಲ. ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ 13 ತಿಂಗಳ ಸರ್ಕಾರ ಪತನದೊಂದಿಗೆ 1999ರಲ್ಲಿ ದೇಶ ಮತ್ತೊಮ್ಮೆ ಲೋಕಸಭಾ ಚುನಾವಣೆ ಎದುರಿಸುವಂತಾಯಿತು. ಈ ಸಂದರ್ಭ ಕಾಂಗ್ರೆಸ್‌ನ ವಿನಯಕುಮಾರ್ ಸೊರಕೆ 3,52,326 ಮತ ಪಡೆದರೆ, ಬಿಜೆಪಿ ಐ.ಎಂ. ಜಯರಾಮ ಶೆಟ್ಟಿ 3,20,739 ಮತ ಗಳಿಸಿ, 31587 ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು. ಆದರೆ 2004ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಸಚಿವೆ ಮನೋರಮಾ ಮಧ್ವರಾಜ್ ಕಾಂಗ್ರೆಸ್‌ನ ವಿನಯಕುಮಾರ್ ಸೊರಕೆ ಅವರನ್ನು 29,003 ಮತಗಳ ಅಂತರದಲ್ಲಿ ಸೋಲಿಸಿದ್ದರು. ವಿಶೇಷವೆಂದರೆ 3ನೇ ಸ್ಥಾನ ಪಡೆದಿದ್ದ ಜೆಡಿಎಸ್‌ನ ತಾರನಾಥ ಶೆಟ್ಟಿ ಕೊಡವೂರು 45,574 ಮತ ಗಳಿಸಿ ಕಾಂಗ್ರೆಸ್ ಗೆಲುವಿಗೆ ತಡೆಯೊಡ್ಡಿದ್ದರು.

ಮೋದಿ ಅಲೆಯಿಂದ ಪ್ರಬಲ: ಕ್ಷೇತ್ರ ವಿಂಗಡಣೆ ಬಳಿಕ 2009ರ ಲೋಕಸಭಾ ಚುನಾವಣೆಯಲ್ಲಿ ದ.ಕ. ಸಂಸದರಾಗಿದ್ದ ಡಿವಿ ಸದಾನಂದ ಗೌಡ ಉಡುಪಿಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆಯವರನ್ನು 27,018 ಮತಗಳಿಂದ ಸೋಲಿಸಿದ್ದರು. ಡಿವಿಎಸ್‌ರಿಂದ ತೆರವಾದ ಸ್ಥಾನಕ್ಕೆ 2012ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ, ಬಿಜೆಪಿಯ ಸುನೀಲ್ ಕುಮಾರ್ ಅವರನ್ನು 45,724 ಅಂತರದಿಂದ ಸೋಲಿಸಿ ಸಂಸತ್ ಪ್ರವೇಶಿಸಿದ್ದರು. ಆದರೆ 2014ರಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಬಿಜೆಪಿ ಘೋಷಣೆಯಾದ ಬಳಿಕ ಪಕ್ಷದ ನೆಲೆ ವಿಸ್ತಾರವಾಗಿದ್ದು, ಸ್ಥಳೀಯ ಮಟ್ಟದಲ್ಲೂ ಪ್ರಬಲವಾಗಿದೆ. ಇದಕ್ಕೆ 2014 ಮತ್ತು 2019ರ ಚುನಾವಣೆ ಫಲಿತಾಂಶವೇ ಸಾಕ್ಷಿ.

Leave a Reply

Your email address will not be published. Required fields are marked *