More

    ಇತಿಹಾಸ ಪ್ರಸಿದ್ಧ ಭದ್ರಕಾಳಿ ದೇವಾಲಯ

    ಗೋಣಿಕೊಪ್ಪ: ಚಮ್ಮಟೀರ ಹಾಗೂ ಮಚ್ಚಿಯಂಡ ಕುಟುಂಬದ ಹಿರಿಯರೊಬ್ಬರು ಕಾಡಿನಲ್ಲಿ ದನಗಳನ್ನು ಮೇಯಿಸುತ್ತಿದ್ದ ಸಂದರ್ಭ ಕಾಡಿನೊಳಗೆ ಕೋಳಿಯೊಂದು ಕೂಗಿದಂತೆ ಭಾಸವಾಗುತ್ತದೆ.

    ಸದ್ದು ಬಂದ ದಿಕ್ಕಿನತ್ತ ತೆರಳಿ ನೋಡಿದಾಗ ಅಲ್ಲಿ 7 ಹೆಡೆ ಬಿಚ್ಚಿದ ಸರ್ಪ ಕಾಣಿಸುತ್ತದೆ. ನಂತರ ಈ ಕುರಿತು ದೈವದ ಬಳಿ ಪ್ರಶ್ನಿಸಿ ನೋಡಿದಾಗ ಅಲ್ಲಿ ಭದ್ರಕಾಳಿ ದೇವರು ನೆಲೆಸಿರುವುದು ತಿಳಿಯುತ್ತದೆ. ನಂತರ ಚಮ್ಮಟಿರ, ಮಚ್ಚಿಯಂಡ, ಮೂಕಳೇರ, ಮಾಕಂಡ ಕುಟುಂಬಸ್ಥರು ಸೇರಿ ಗುಡಿಸಲು ನಿರ್ಮಿಸಿ ಪೂಜಿಸುತ್ತಿದ್ದ ಸ್ಥಳವೇ ಈಗಿನ ಪೊನ್ನಂಪೇಟೆ ಹಳ್ಳಿಗಟ್ಟು ಭದ್ರಕಾಳಿ ದೇವಸ್ಥಾನ.

    ಸುಮಾರು 950 ವರ್ಷ ಇತಿಹಾಸ ಇರುವ ಈ ಸನ್ನಿಧಿಯಲ್ಲಿ ನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತಲೇ ಬಂದಿದೆ. ವಿಶೇಷವೆಂದರೆ ಇಲ್ಲಿ ಎಲ್ಲ ದೇವಾಲಯದಲ್ಲಿ ಇರುವಂತೆ ಗರ್ಭಗುಡಿಯ ಎದುರು ನಂದಿ ವಿಗ್ರಹವಿಲ್ಲ. ಬದಲಾಗಿ ಆನೆಯ ವಿಗ್ರಹವಿದೆ. ಇದನ್ನು ಸ್ಥಳೀಯರು ಐರಾವತ ಎಂದು ಕರೆಯುತ್ತಾರೆ. ಆದರೆ, ಇದಕ್ಕೆ ನಿರ್ದಿಷ್ಟ ಕಾರಣ ತಿಳಿದಿಲ್ಲ. ಈ ದೇವಾಲಯದಲ್ಲಿ ಬೇರೆಡೆ ಇರುವಂತೆ ಗಣಪತಿ ಗುಡಿ ಇಲ್ಲ. ಇಲ್ಲಿರುವ ಆನೆಯ ವಿಗ್ರಹಕ್ಕೆ ಗಣಪತಿ ಪೂಜೆ ಸಲ್ಲಿಸಲಾಗುತ್ತದೆ. ಟಿಪ್ಪು ದಾಳಿ ಮಾಡಿದ ಸಂದರ್ಭ ಆನೆಯ ವಿಗ್ರಹದ ಒಂದು ದಂತ ಹಾನಿಗೊಳಗಾಗಿತ್ತು. ಕೆಲವು ವರ್ಷಗಳ ಹಿಂದೆ ದೇವಾಲಯ ಮರುಪ್ರತಿಷ್ಠಾಪನೆ ಸಂದರ್ಭದಲ್ಲಿ ದೈವದ ಪ್ರಶ್ನೆ ಸಂದರ್ಭ ವಿಘ್ನವಾಗಿರುವ ಆನೆಯನ್ನು ಬದಲು ಮಾಡಬೇಕು ಎಂದು ಬಂದಿತು. ಈ ಹಿನ್ನೆಲೆಯಲ್ಲಿ ಹೊಸ ಆನೆಯ ಮೂರ್ತಿಯನ್ನು ಕಾರ್ಕಳದಿಂದ ಕೆತ್ತಿಸಿ ತಂದು ಪ್ರತಿಷ್ಠಾಪಿಸಲಾಗಿದೆ. ದೇವಾಲಯ ಆವರಣದಲ್ಲಿ ಚಾಮುಂಡಿ ಕಲ್ಲು ಮತ್ತು ನಾಗ ಬನವಿದೆ.

    ಚಮ್ಮಟಿರ ಕುಟುಂಬಸ್ಥರು ಈ ದೇವಾಲಯದ ತಕ್ಕ ಮುಖ್ಯಸ್ಥರು. ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಹುದ್ದೆ ಮೂಕಳೆರ ಕುಟುಂಬಸ್ಥರ ಪಾಲಿಗೆ ಬರುತ್ತದೆ. ಪ್ರಸ್ತುತ ಅಧ್ಯಕ್ಷರಾಗಿ ಚಮ್ಮಟೀರ ಸುಗುಣ ಮುತ್ತಣ್ಣ, ಗೌರವ ಕಾರ್ಯದರ್ಶಿ ಮೂಕಳೇರ ರಮೇಶ್ ಕಾರ್ಯನಿರ್ವಹಿಸುತ್ತಿದ್ದಾರೆ.

    ವಿಶೇಷ ಹಬ್ಬ: ಇಲ್ಲಿ ವರ್ಷಕ್ಕೆ ಒಂದು ಬಾರಿ ಮೇ ತಿಂಗಳ ಎರಡನೆ ಶನಿವಾರ-ಭಾನುವಾರದಂದು ಕೊಡಗಿನ ವಿಶಿಷ್ಟ ಬೇಡು ಹಬ್ಬ ನಡೆಯುತ್ತದೆ. ಈ ಹಬ್ಬದಲ್ಲಿ ಕೆಸರೆರಚಾಟ ವಿಶೇಷವಾಗಿದೆ. ಹತ್ತಿರದ ಕೆರೆಯಿಂದ ಕೆಸರು ತಂದು ಪರಸ್ಪರ ಎರಚಿ ಸಂಭ್ರಮಿಸುತ್ತಾರೆ. ಊರವರು ಮಾತ್ರ ಇದರಲ್ಲಿ ಭಾಗವಹಿಸುತ್ತಾರೆ. ಬೇರೆ ಊರಿನವರ ಮೇಲೆ ಕೆಸರು ಎರಚುವಂತಿಲ್ಲ. ಅವರ ಕೈಯಲ್ಲಿ ಒಂದು ಕೋಲು ಇರುತ್ತದೆ. ಕೋಲಿದ್ದವರ ಮೇಲೆ ಕೆಸರು ಎರಚುವುದು ನಿಷಿದ್ಧ. ಹಬ್ಬದಂದು ಬಿದಿರಿನಿಂದ ಎರಡು ಕುದುರೆಗಳನ್ನು ಮತ್ತು ಮೊಗವನ್ನು ಮಾಡಲಾಗುತ್ತದೆ. ಒಂದು ಕುದುರೆ ಚಮ್ಮಟೀರ ಕುಟುಂಬದಿಂದ ಮತ್ತೊಂದು ಮೂಕಳೆರ ಕುಟುಂಬದಿಂದ ತರಲಾಗುತ್ತದೆ.

    ಕೊಡಗಿನ ಸಾಂಪ್ರದಾಯಿಕ ಹಬ್ಬ ಹುತ್ತರಿಯನ್ನು ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ದೇವಾಲಯದಲ್ಲಿ ಆಚರಿಸುತ್ತಾರೆ. ನವರಾತ್ರಿಯಂದು ಇಲ್ಲಿ 9 ದಿನಗಳೂ ದುರ್ಗಾ ಪೂಜೆ ನಡೆಯುತ್ತದೆ. ಮೊದಲ ಎಂಟು ದಿನ ರಾತ್ರಿ ಮತ್ತು ಕೊನೆಯ ದಿನ ಹಗಲು ಪೂಜೆ ಇರುತ್ತದೆ. ಷಷ್ಠಿ, ಚೌತಿ ಮತ್ತು ನಾಗರ ಪಂಚಮಿಯಂದು ವಿಶೇಷ ಪೂಜಾ ಕೈಂಕರ್ಯ ನಡೆಯುತ್ತವೆ. ಇಲ್ಲಿ ನಡೆಯುವ ಸ್ವಯಂವರ ಪೂಜೆ ವಿಶೇಷವಾಗಿದೆ. ಇಲ್ಲಿ ಹರಕೆ ಮಾಡಿಕೊಂಡರೆ ಈಡೇರುತ್ತದೆ ಎಂಬುದು ಭಕ್ತರ ನಂಬಿಕೆ. ಹಿಂದುಗಳು ಮಾತ್ರವಲ್ಲದೆ, ಮುಸ್ಲೀಮರೂ ಇಲ್ಲಿ ಬಂದು ಹರಕೆ ಮಾಡಿಕೊಳ್ಳುತ್ತಾರೆ.

    ಕಳ್ಳತನಕ್ಕೆ ಯತ್ನಿಸಿ ದಾರಿ ತಪ್ಪಿದ ಖದೀಮರು: ದೇವಾಲಯದ ಕಳ್ಳತನಕ್ಕೆ ಯತ್ನಿಸಿ ಕಳ್ಳರು ದಾರಿ ತಪ್ಪಿ ಸಿಕ್ಕಿಬಿದ್ದ ಕತೆಯೂ ಇದೆ. ದಂಪತಿ ದೇವಾಲಯ ಹುಂಡಿ ಒಡೆಯಲು ಯತ್ನಿಸಿ ಸಾಧ್ಯವಾಗದೆ ವಾಪಸ್ ಹೋಗಿದ್ದಾರೆ. ಆದರೆ, ಅವರಿಗೆ ದಾರಿ ತಪ್ಪಿದಂತಾಗಿ ಊರು ಬಿಟ್ಟು ಹೋಗಲು ಆಗದೇ ಅಲ್ಲೇ ಓಡಾಡಿಕೊಂಡು ಇದ್ದರು. ಹೆಂಡತಿ ಗಂಡನಿಂದ ಬೇರೆಯಾಗಿ ಕೊನೆಗೆ ಪತಿ ಪೊಲೀಸ್ ಠಾಣೆಗೆ ಹೆಂಡತಿ ಕಾಣೆಯಾದ ಬಗ್ಗೆ ದೂರು ನೀಡಿದ್ದಾನೆ. ದೇವಾಲಯದ ಸಿಸಿಟಿವಿ ಪರಿಶೀಲಿಸಿದಾಗ ಕಳ್ಳತನದ ಯತ್ನ ಕಂಡು ಬಂದಿದೆ. ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಕೊಡಗಿನಲ್ಲಿ ನಡೆದ ಸರಣಿ ಘಂಟೆ ಕಳ್ಳತನ ಪ್ರಕರಣ ಪತ್ತೆಯಾಗಿದ್ದು, ಇದೇ ದೇವಾಲಯದಿಂದ.

    ದೇವಾಲಯಕ್ಕೆ ತೆರಳುವ ಮಾರ್ಗ
    ಮೈಸೂರು, ಮಡಿಕೇರಿ ಕಡೆಯಿಂದ ಬರುವವರು ಗೋಣಿಕೊಪ್ಪ ಮಾರ್ಗವಾಗಿ ಪೊನ್ನಂಪೇಟೆ ತಲುಪಬೇಕು. ಅಲ್ಲಿಂದ ಕುಂದ ಮಾರ್ಗವಾಗಿ ಒಂದು ಕಿಮೀ ಸಾಗಿದರೆ ದೇವಾಲಯ ಸಿಗುತ್ತದೆ. ಪೊನ್ನಂಪೇಟೆವರೆಗೆ ಬಸ್ ವ್ಯವಸ್ಥೆ ಇದ್ದು, ಅಲ್ಲಿಂದ ಖಾಸಗಿ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ.

    ಇದು ಇತಿಹಾಸ ಪ್ರಸಿದ್ಧ ದೇವಾಲಯವಾಗಿದೆ. ಇಲ್ಲಿ ನಂದಿ ಬದಲಿಗೆ ಆನೆ ಇದೆ. ಟಿಪ್ಪು ದಾಳಿಯಿಂದ ಹಾನಿಗೊಳಗಾದ ಆನೆ ಮೂರ್ತಿಯನ್ನು ಹೊಸದಾಗಿ ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ನಡೆಯುವ ಬೇಡು ಹಬ್ಬ ವಿಶಿಷ್ಟವಾಗಿದೆ. ವಿವಿಧ ಊರುಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.
    ಚಮ್ಮಟಿರ ಪ್ರವೀಣ್ ಉತ್ತಪ್ಪ ದೇವಾಲಯ ಆಡಳಿತ ಮಂಡಳಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts