ಜಮಖಂಡಿ: ಓಲೇಮಠದ ಶ್ರೀಗಳು ಸಮಾಜಕ್ಕೆ ನೀಡಿದ ಮಾರ್ಗದರ್ಶನ ಸದಾ ಸ್ಮರಣೀಯ ಎಂದು ಕೊಪ್ಪಳ ಗವಿಸಿದ್ಧೇಶ್ವರ ಶ್ರೀಗಳು ಹೇಳಿದರು.
ನಗರದ ಓಲೇಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ. ಚನ್ನಬಸವ ಮಹಾಸ್ವಾಮೀಜಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಚನ್ನಬಸವ ಶ್ರೀಗಳು ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯ ಬೆಸೆದುಕೊಂಡಿದ್ದರು. ಅವರ ಸಾಹಿತ್ಯ ನಮ್ಮೊಂದಿಗೆ ಯಾವಾಗಲೂ ಇರುತ್ತದೆ ಎಂದರು.
ಅಥಣಿ ಮೋಟಗಿ ಮಠದ ಡಾ. ಪ್ರಭುಚನ್ನಬಸವ ಶ್ರೀಗಳು ಮಾತನಾಡಿ, ಶ್ರೀಗಳು ಬರವಣಿಗೆಗೆ ಹೆಚು ಆಸಕ್ತಿ ವಹಿಸಿದ್ದರು. ಅವರ ಸಾಹಿತ್ಯ, ಹೋರಾಟಗಳು ಚಿಂತನೆಗಳಿಗೆ ಹೊಸ ದಿಕ್ಕು ಹಾಕಿಕೊಟ್ಟಿದ್ದಾರೆ ಎಂದರು.
ಇಳಕಲ್ಲ ಗುರುಮಹಾಂತ ಶ್ರೀಗಳು ಮಾತನಾಡಿ, ಶ್ರೀಗಳು ತಾಯಿ ಹೃದಯ, ಬಸವ ಹೃದಯವುಳ್ಳವರಾಗಿದ್ದರು. ಅವರ ಸಾಹಿತ್ಯ ಸೇವೆ ಅತ್ಯದ್ಭುತವಾಗಿತ್ತು. ಪರಿಪೂರ್ಣ ವ್ಯಕ್ತಿತ್ವ ಹೊಂದಿದ್ದರು. ಅನೇಕ ಸಾಧಕರ ಮಾರ್ಗದರ್ಶಿಯಾಗಿದ್ದರು ಎಂದರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ಶ್ರೀಗಳು ಉತ್ತಮ ವಾಗ್ಮಿಗಳು, ನಾಡಿನ ಶ್ರೇಷ್ಠ ಪರಂಪರೆಯ ಗುರುಗಳ ಸಾಲಿನಲ್ಲಿದ್ದರು. ಅವರ ಅಗಲಿಕೆಯಿಂದ ಜಮಖಂಡಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಡಾ. ಚನ್ನಬಸವ ಶ್ರೀಗಳು ಜಮಖಂಡಿ ಜಿಲ್ಲೆ, ಸಾವಳಗಿ ತಾಲೂಕು ಆಗಬೇಕೆಂದು ಹೋರಾಟದಲ್ಲಿ ತೊಡಗಿಕೊಂಡಿದ್ದರು. ಕನಸು ಕಂಡಿದ್ದರು, ಅದು ಆಗದಿರುವುದು ಬೇಸರ ಮೂಡಿಸಿದೆ. ಅವರಲ್ಲಿ ಜ್ಞಾನ ಸಂಪತ್ತು ಅಗಾಧವಾಗಿತ್ತು. ನಾಡಿನ ಹೆಸರಾಂತ ಮಠಗಳಿಗೆ ಅವರು ಆಯ್ಕೆಯಾಗಲು ಸಾಕಷ್ಟು ಅವಕಾಶಗಳಿದ್ದರೂ ಅವರು ಮಾತ್ರ ಜಮಖಂಡಿಯಲ್ಲೇ ಇದ್ದುಕೊಂಡೆ ಮಾರ್ಗದರ್ಶನ ನೀಡಿದರು ಎಂದು ಹೇಳಿದರು.
ಧಾರವಾಡ ಮುರುಘಾ ಮಠದ ಶ್ರೀಗಳು, ಹರ್ಷಾನಂದ ಶ್ರೀಗಳು, ಶಿವಲಿಂಗ ಪಂಡಿತಾರಾಧ್ಯ ಶ್ರೀಗಳು., ವಿಶ್ವಪ್ರಭುದೇವ ಶ್ರೀಗಳು, ಹುಲಸೂರ ಶ್ರೀಗಳು, ಮಹಾಲಿಂಗಪುರ ಶ್ರೀಗಳು, ಅಮಿನಗಡದ ಶ್ರೀಗಳು, ಕನಕಗಿರಿ ಶ್ರೀಗಳು, ಗುಣದಾಳ ಶ್ರೀಗಳು, ಮರೆಗುದ್ದಿ ಶ್ರೀಗಳು, ರಾಮದುರ್ಗ ಶ್ರೀಗಳು, ಗೌರಿಶಂಕರ ಶ್ರೀಗಳು, ಬಬಲೇಶ್ವರ ಡಾ. ಮಹಾದೇವ ಶ್ರೀಗಳು, ಖಜ್ಜಿಡೋಣಿ ಶ್ರೀಗಳು, ಕಮತಗಿ ಶ್ರೀಗಳು, ಕುಂದರಗಿ ಶ್ರೀಗಳು, ಬಾಗಲಕೋಟೆ ಚರಂತಿಮಠ ಶ್ರೀಗಳು, ಚಿಮ್ಮಡ ಶ್ರೀಗಳು ಮತ್ತಿತರರಿದ್ದರು.