More

  ಸಾವಿರಾರು ಕೋಟಿಗಳಲ್ಲಿ ಮಾತನಾಡುತ್ತವೆ ಇವರ ಸಿನಿಮಾಗಳು!

  ಸಾವಿರಾರು ಕೋಟಿಗಳಲ್ಲಿ ಮಾತನಾಡುತ್ತವೆ ಇವರ ಸಿನಿಮಾಗಳು!ಕ್ರಿಸ್ಟೋಫರ್ ನೋಲನ್! ತನ್ನ ಅಪರೂಪದ ಪ್ರತಿಭೆಯಿಂದ ಜಗತ್ತನ್ನು ನಿಬ್ಬೆರಗಾಗಿಸಿದ ನಿರ್ದೇಶಕ. ಇವರ ಸಿನಿಮಾಗಳು ಮಾತಾಡುವುದು ಹತ್ತು, ನೂರು ಕೋಟಿಗಳಲ್ಲಲ್ಲ. ಬದಲಾಗಿ ಸಾವಿರಗಟ್ಟಲೆ ಕೋಟಿಗಳಲ್ಲಿ! ಜಗತ್ತಿನ ಅತ್ಯಂತ ಶ್ರೀಮಂತ ನಿರ್ದೇಶಕರಲ್ಲಿ ಒಬ್ಬರಾಗಿರುವ ಕ್ರಿಸ್ಟೋಫರ್ ನೋಲನ್ ಜಾಗತಿಕ ಸಿನಿಮಾದಲ್ಲಿ ಹೊಸ ಅಲೆ ಮೂಡಿಸಿದವರು. ವೈಜ್ಞಾನಿಕ ಸಾಧ್ಯಾಸಾಧ್ಯತೆಗಳನ್ನು ಕಲ್ಪನೆಯೊಂದಿಗೆ ಹೆಣೆದು ಇವರು ನಿರ್ದೇಶಿಸುವ ಹೊಸರುಚಿಯ ಸಿನಿಮಾಗಳು ಜನರಿಗೆ ಬಲು ಪ್ರೀತಿ. ಪ್ರತೀ ಚಿತ್ರವೂ ಹಿಟ್ ಆದರೂ ಒಂದು ಸಿನಿಮಾದ ಯಶಸ್ಸಿನ ಸೂತ್ರಗಳನ್ನು ಮತ್ತೊಂದಕ್ಕೆ ಹಾಕುವ ಸಿದ್ಧಸೂತ್ರದ ಸುಲಭದ ಯಶಸ್ಸು ನೋಲನ್​ಗೆ ಬೇಡ. ಪ್ರತೀ ಚಿತ್ರದ ತಯಾರಿಯೂ ನೋಲನ್​ಗೆ ಜಗತ್ತನ್ನು ಹೊಸ ದೃಷ್ಟಿಕೋನದಿಂದ ನೋಡುವ ಒಂದು ಅವಕಾಶ. ಒಂದು ತಪಸ್ಸು. ಒಂದು ಹೊಸ ಜನ್ಮ.

  ಕ್ರಿಸ್ಟೋಫರ್ ನೋಲನ್ ಹುಟ್ಟಿದ್ದು 1970ರಲ್ಲಿ ಲಂಡನ್ನಿನ ವೆಸ್ಟ್ ಮಿನಿಸ್ಟರ್​ನಲ್ಲಿ. ತಂದೆ ಜಾಹೀರಾತು ಕಂಪನಿಯೊಂದರಲ್ಲಿ ನಿರ್ದೇಶಕ. ತಾಯಿ ಗಗನಸಖಿಯಾಗಿದ್ದವರು. ‘ಸ್ಟಾರ್ ವಾರ್ಸ್’ ಮತ್ತು ‘2011: ಅ ಸ್ಪೇಸ್ ಒಡೆಸ್ಸಿ’ ಸಿನಿಮಾಗಳಿಂದ ಬಾಲ್ಯದಲ್ಲೇ ಪ್ರೇರಿತರಾಗಿ ತಂದೆಯ ಕ್ಯಾಮರಾದಿಂದ ಕಿರುಚಿತ್ರಗಳನ್ನು ನಿರ್ವಿುಸಿದ್ದ ಬಾಲಕ ನೋಲನ್. ಹನ್ನೊಂದರ ಹರಯದಲ್ಲೇ ತಾನು ಸಿನಿಮಾ ನಿರ್ದೇಶಕನೇ ಆಗಬೇಕೆಂದು ನಿರ್ಧರಿಸಿದ ಅದ್ಭುತ ಬಾಲಕ! ಹುಟ್ಟಿನಿಂದಲೇ ಅಮೆರಿಕ ಮತ್ತು ಬ್ರಿಟನ್ ಎರಡೂ ದೇಶಗಳ ಪೌರತ್ವ ಹೊಂದಿರುವ ನೋಲನ್ ತಾಯಿ ಅಮೆರಿಕನ್ ಆದುದರಿಂದ ನೋಲನ್ ಬಾಲ್ಯ ಎರಡು ದೇಶಗಳಿಗೂ ಓಡಾಡುತ್ತ ಕಳೆದಿತ್ತು. ಇಂಗ್ಲಿಷ್ ಸಾಹಿತ್ಯದ ಓದು. ಪದವಿಯ ನಂತರ ಸಿನಿಮಾ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಕೆಲಸ. ಗೆಳತಿ ಎಮ್ಮಾ ಥಾಮ್ಸನ್ ಜತೆ 1997ರಲ್ಲಿ ವಿವಾಹ. 28ರ ಹರೆಯದಲ್ಲಿ ಮೊದಲ ಚಿತ್ರ ‘ಫಾಲೋವಿಂಗ್’ ನಿರ್ದೇಶನ. ಬ್ರಿಟಿಷ್ ಚಿತ್ರೋದ್ಯಮದ ಯಾರೂ ಹಣಕಾಸಿನ ಸಹಾಯ ಮಾಡಲು ತಯಾರಾಗದ ಕಾರಣ ತಮ್ಮ ಉಳಿತಾಯದ ಹಣದ ಜತೆ ಸರ್ಕಸ್ ಮಾಡಿ ಒಟ್ಟು ಎಂಟು ಸಾವಿರ ಡಾಲರ್ ಕೂಡಿಸಿ ಅಷ್ಟೇ ಬಜೆಟ್​ನಲ್ಲಿ ಚಿತ್ರ ತಯಾರಿಸಿದ ಛಲಗಾರ. ಆ ಸಿನಿಮಾದಿಂದ ‘ಮೆಮೆಂಟೋ’ ನಿರ್ದೇಶಿಸುವ ಅವಕಾಶ ಸಿಕ್ಕಿತು. ‘ಮೆಮೆಂಟೋ’ ಒಂದು ಸೈಕಾಲಾಜಿಕಲ್ ಥ್ರಿಲ್ಲರ್. ಈ ಚಿತ್ರ ತನ್ನ ಹೊಸ ರೀತಿಯ ನಿರೂಪಣೆಯಿಂದ, ಹಿಂದುಮುಂದಾಗಿ ಕಥೆಹೇಳುವ ಶೈಲಿಯಿಂದ ಜನರ ಗಮನ ಸೆಳೆಯಿತು. ಅಷ್ಟೇ ಅಲ್ಲ, ಆಸ್ಕರ್ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಿಗೆ ಈ ಚಿತ್ರದ ಚಿತ್ರಕಥೆ ನಾಮನಿರ್ದೇಶಿತವಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೋಲನ್ ಹೆಸರು ಮಾಡಿದರು.

  ಮುಂದಿನ ಚಿತ್ರ ‘ಇನ್ಸೋಮ್ನಿಯಾ’ ಕೂಡ ಯಶಸ್ವಿಯಾದರೂ ಅದು ಹೆಚ್ಚು ರ್ಚಚಿಸಲ್ಪಡದ ಸಿನಿಮಾ. ನೋಲನ್ ಸಿನಿಮಾಗಳಲ್ಲಿ ನಿರ್ಲಕ್ಷಿತ ಸಿನಿಮಾ ಎನ್ನಬಹುದು. ಆದರೆ ವಾರ್ನರ್ ಬ್ರದರ್ಸ್ 2003ರಲ್ಲಿ ಗೋಥಮ್ ನಗರದ ಸೂಪರ್​ಹೀರೋ ಆಧಾರಿತ ಚಲನಚಿತ್ರಗಳ ಸರಣಿಯ ಮೊದಲ ಚಿತ್ರ ‘ಬ್ಯಾಟ್​ವ್ಯಾನ್ ಬಿಗಿನ್ಸ್’ (2005) ನಿರ್ದೇಶಿಸಲು ನೋಲನ್​ರನ್ನು ಆಯ್ಕೆ ಮಾಡಿದಾಗ ಅದು ನೋಲನ್ ಪಾಲಿಗೆ ಮಾತ್ರವಲ್ಲ ಸಿನಿಮಾ ಕ್ಷೇತ್ರಕ್ಕೂ ಮಹತ್ವದ ತಿರುವು ನೀಡಲಿರುವ ನಿರ್ಧಾರವಾಗಿತ್ತು. ಸರಣಿಯ ಎರಡನೇ ಚಿತ್ರ ‘ದ ಡಾರ್ಕ್ ನೈಟ್’ (2008) ಮತ್ತು ಮೂರನೆಯ ಚಿತ್ರ ‘ದ ಡಾರ್ಕ್ ನೈಟ್ ರೈಸಸ್’ (2012). ಈ ಮೂರೂ ಸಿನಿಮಾಗಳು ಜನರನ್ನು ಹುಚ್ಚೆಬ್ಬಿಸಿದವು. ಕ್ರಿಶ್ಚಿಯನ್ ಬೇಲ್, ಗ್ಯಾರಿ ಓಲ್ಡ್​ಮ್ಯಾನ್, ಮೈಕೆಲ್ ಕೇನ್, ಆನ್ ಹಾಥ್​ವೇ, ಮಾರ್ಗನ್ ಫ್ರೀಮನ್, ಸಿಲಿಯನ್ ಮರ್ಫಿ, ಟಾಮ್ ಹಾರ್ಡಿ ಮುಂತಾದ ಘಟಾನುಘಟಿ ತಾರೆಯರ ದಂಡೇ ಇತ್ತು. ಎಲ್ಲರೂ ಸ್ಪರ್ಧೆಗಿಳಿದವರಂತೆ ನಟಿಸುತ್ತಿದ್ದರು. ಆದರೆ ಎರಡನೇ ಸಿನಿಮಾದಲ್ಲಿ ಜೋಕರ್ ಪಾತ್ರ ವಹಿಸಿದ ಹೀತ್ ಲೆಡ್ಜರ್ ಜೋಕರ್ ಎಂಬ ಖಳನ ಪಾತ್ರವೇ ಅಕ್ಷರಶಃ ತಾನಾಗಿಬಿಟ್ಟಿದ್ದ. ಜಗತ್ತಿನ ಅತ್ಯುತ್ತಮ ಪಾತ್ರಗಳ ಪೈಕಿ ನೋಲನ್​ರ ಜೋಕರ್​ಗೆ ಶಾಶ್ವತ ಸ್ಥಾನ ಗಳಿಸಿಕೊಟ್ಟಾತ ಹೀತ್. ಅತ್ಯುತ್ತಮ ಸಹನಟ ಆಸ್ಕರ್ ಪ್ರಶಸ್ತಿ ಘೊಷಣೆಯಾಗುವ ಹೊತ್ತಿಗೆ ಆ ಪಾತ್ರದ ಪ್ರಭಾವದಿಂದ ಹೊರಬರಲಾಗದೇ ಒದ್ದಾಡುತ್ತಿದ್ದ 29ರ ಹೀತ್ ಡ್ರಗ್ ಸೇವನೆಯಲ್ಲಿ ವ್ಯತ್ಯಾಸವಾಗಿ ಮೃತಪಟ್ಟಿದ್ದರು.

  ಈ ಮೂರು ಸಿನಿಮಾಗಳ ನಡುವೆಯೇ ‘ದ ಪ್ರೆಸ್ಟಿಜ್’ (2006), ‘ಇನ್ಸೆಪ್ಷನ್’ (2010) ಚಿತ್ರಗಳೂ ತೆರೆಕಂಡವು. ಕ್ರಿಶ್ಚಿಯನ್ ಬೇಲ್ ಮತ್ತು ಜಾಕ್​ವುನ್ ಅದ್ಭುತ ನಟನೆಯ ‘ದ ಪ್ರೆಸ್ಟಿಜ್’ ಇಬ್ಬರು ಮ್ಯಾಜಿಶಿಯನ್​ಗಳ ಬದ್ಧ ವೈರದ ಕಥೆ ಹೇಳುವ ಸಿನಿಮಾ. ಒಬ್ಬರು ಮತ್ತೊಬ್ಬರನ್ನು ಮೀರಿಸಲು ವೈಯಕ್ತಿಕ ಬದುಕಿನಲ್ಲಿ ಊಹಿಸಲಾರದಷ್ಟು ತ್ಯಾಗ ಮಾಡುವ ಈ ಪಾತ್ರಗಳ ತೊಳಲಾಟವನ್ನು ನೋಲನ್ ತೆರೆಯ ಮೇಲೆ ತೋರಿಸಿರುವ ಪರಿಯನ್ನು ನೋಡಿಯೇ ಅನುಭವಿಸಬೇಕು.

  ‘ಇನ್ಸೆಪ್ಷನ್’ ನೋಲನ್ನರ ವಿಶಿಷ್ಟ ಚಿತ್ರ. ನೂರರವತ್ತು ಮಿಲಿಯನ್ ಡಾಲರ್ ವೆಚ್ಚದಲ್ಲಿ ತಯಾರಾದ ಈ ಸಿನಿಮಾ ನೈಜತೆ ಮತ್ತು ಕನಸುಗಳ ನಡುವಿನ ಗೆರೆಯನ್ನು ಅಳಿಸಿ ಹಾಕಿತು! ಬೇರೆಯವರ ಕನಸಿನೊಳಗೆ ಹೋಗಿ ಅವರ ಮಿದುಳಿನೊಳಗೆ ತನ್ನ ಯೋಚನೆಗಳನ್ನು ಬಿತ್ತುವ ಹೊಸಬಗೆಯ ಕಳ್ಳತನದ ಕಥೆ. ಒಂದು ಸಲಕ್ಕೆ ಅರ್ಥವಾಗದ ಸಿನಿಮಾ ಎಂದು ಎಲ್ಲೆಡೆ ಚರ್ಚೆಗೊಳಗಾದರೂ 2010ರ ಅತೀಹೆಚ್ಚು ಹಣಗಳಿಸಿದ ಮೊದಲ ಐದು ಚಿತ್ರಗಳಲ್ಲಿ ಇದೂ ಒಂದು. ಲಿಯೊನಾಡೋ ಡಿ ಕಾಪ್ರಿಯೋ ಅಭಿನಯದ ಈ ಚಿತ್ರ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನೂ ಗಳಿಸಿತು.

  ಇನ್ನು 2014ರ ‘ಇಂಟರ್​ಸ್ಟೆಲ್ಲರ್’ ಮಾಥ್ಯೂ ಮೆಕೊನಿ ಮತ್ತು ಆನ್ ಹಾಥ್​ವೇ ಅಭಿನಯದ ಸಿನಿಮಾ. ಕರಾಳ ಭವಿಷ್ಯದ ಕುರಿತ ಡಿಸ್ಟೋಪಿಯನ್ ಚಿತ್ರ. (ಯುಟೋಪಿಯಾ ಎಂಬ ಕಾಲ್ಪನಿಕ ಆದರ್ಶ ರಾಜ್ಯದ ವಿರುದ್ಧ) ಭೂಮಿ ವಾಸಕ್ಕೆ ಅನರ್ಹವಾದಾಗ ಹೊಸದೊಂದು ವಾಸಸ್ಥಾನವನ್ನು ಹುಡುಕುವ, ಸ್ಪೇಸ್ ಕ್ರಾಫ್ಟ್​ನಲ್ಲಿ ಮಾನವ ಸಂತತಿಯನ್ನು ಸಂರಕ್ಷಿಸಲು ಹೋರಾಡುವ ವಿಜ್ಞಾನಿಗಳು, ಗಗನಯಾನಿಗಳ ಕಥೆ. ರೋಚಕ ಎನ್ನಿಸುವ ಈ ವೈಜ್ಞಾನಿಕ ಕಥೆಯಲ್ಲಿನ ತಂದೆ-ಮಗಳ ಪ್ರೇಮದ ಎಳೆ ನೋಡುಗರನ್ನು ಕಣ್ಣೀರಾಗಿಸುತ್ತದೆ. ಮ್ಯಾಥ್ಯೂ ಮೆಕೊನಿಯ ಅಭಿನಯ ಅಪರೂಪದ್ದು.

  ಎರಡನೇ ಮಹಾಯುದ್ಧದ ಸಂದರ್ಭದಲ್ಲಿ(1940) ಫ್ರಾನ್ಸ್​ನ ಡನ್ಕಿರ್ಕ್ ಎಂಬ ಸಮುದ್ರ ತೀರದ ಊರಿಗೆ ಜರ್ಮನಿ ಮುತ್ತಿಗೆ ಹಾಕಿರುತ್ತದೆ. ಆ ಸ್ಥಳದಿಂದ ಮಿತ್ರಪಕ್ಷಗಳ (ಬ್ರಿಟಿಷ್, ಫ್ರಾನ್ಸ್ ಮತ್ತು ಬೆಲ್ಜಿಯಂ) ಮೂರು ಲಕ್ಷಕ್ಕೂ ಅಧಿಕ ಸೈನಿಕರನ್ನು ಜರ್ಮನ್ ಸೇನೆಯಿಂದ ಬಿಡಿಸಿಕೊಂಡು ಬರುವ ಐತಿಹಾಸಿಕ ಘಟನೆಯಾಧರಿಸಿದ ಚಿತ್ರ ‘ಡನ್ಕಿರ್ಕ್’(2017). ನಿರ್ವಪಕರು ವಾನರ್ ಬ್ರದರ್ಸ್. ಭೂಸೇನೆ, ನೌಕಾಸೇನೆ ಮತ್ತು ವಾಯುಪಡೆಗಳನ್ನು ಬಳಸಿಕೊಂಡು ನಡೆದ ಈ ಬಿಡುಗಡೆಯ ಆಪರೇಶನ್ ರೋಚಕವಾದದ್ದು. ವಾಯುಪಡೆಯ ಒಂದು ಗಂಟೆ, ನೌಕೆಯಲ್ಲಿ ಒಂದು ದಿನ, ಭೂಮಿಯ ಮೇಲಿನ ಒಂದುವಾರ ನಡೆಯವ ಸಂಗತಿಗಳನ್ನು ಒಟ್ಟಿಗೆ ಹೆಣೆದಿರುವುದು ಮತ್ತು ಅವೆಲ್ಲವನ್ನೂ ಒಂದೇ ಸಮಯಕ್ಕೆ ಕೊನೆಗೊಳಿಸಿರುವ ನೋಲನ್ ಚಾತುರ್ಯಕ್ಕೆ ಸೈ ಎನ್ನಲೇಬೇಕು! ಯುದ್ಧಕ್ಕೆ ಸಂಬಂಧಪಟ್ಟ ಅತ್ಯುತ್ತಮ ಸಿನಿಮಾಗಳಲ್ಲಿ ಡನ್ಕಿರ್ಕ್ ಮುಖ್ಯ ಸ್ಥಾನ ಪಡೆಯುತ್ತದೆ. ನೋಲನ್​ರ 2020ರ ಚಿತ್ರ ‘ಟೆನೆಟ್’ ಅನ್ನು ಭೌತಶಾಸ್ತ್ರದ ಆಳವಾದ ಜ್ಞಾನವಿಲ್ಲದಿದ್ದರೆ ಅರ್ಥ ಮಾಡಿಕೊಳ್ಳಲಾಗದು! ಅವರ ಇತರ ವೈಜ್ಞಾನಿಕ ಚಿತ್ರಗಳಿಗೆ ಹೋಲಿಸಿದರೆ ಟೆನೆಟ್ ಸ್ವಲ್ಪ ಹೆಚ್ಚೇ ಗೊಂದಲ ಉಂಟು ಮಾಡುತ್ತದೆ.

  ನೋಲನ್ ಒಬ್ಬ ಪರ್ಫೆಕ್ಷನಿಸ್ಟ್. ಅವರ ಪ್ರತೀ ಸಿನಿಮಾವೂ ಜನರಲ್ಲಿ ಹೊಸ ನಿರೀಕ್ಷೆ ಹುಟ್ಟುಹಾಕುತ್ತದೆ. ಅವರ ಸಿನಿಮಾಗಳು ಸರಾಗವಾಗಿ ನೋಡಿಸಿಕೊಳ್ಳುವ ಸಿನಿಮಾಗಳಲ್ಲ. ವೀಕ್ಷಕನ ತಲೆಗೆ ಹುಳ ಬಿಡದಿದ್ದರೆ ನೋಲನ್​ಗೆ ಸಮಾಧಾನವಿಲ್ಲ! ಪೂರ್ತಿಯಾಗಿ ಇನ್ವಾಲ್ವ್ ಆಗದೇ ನೋಲನ್ ಸಿನಿಮಾಗಳು ಅರ್ಥವಾಗವು. ಸುಲಿದ ಬಾಳೆಯಹಣ್ಣಿನಂತೆ ಅಲ್ಲ ಅವರ ಚಿತ್ರಗಳು, ಬಾಯಲ್ಲೇ ಇಟ್ಟುಕೊಂಡು ನಿಧಾನವಾಗಿ ಬಾಯಲ್ಲೇ ಕರಗಿಸಿ ರುಚಿನೋಡಬೇಕಾದ ವಿಶಿಷ್ಟ ಚಾಕಲೇಟುಗಳು. ಕಾರ್ಖಾನೆಯಲ್ಲಿ ತಯಾರಾಗಿ ಬಂದ ಹೊದಿಕೆಯಂತಲ್ಲದೇ ಒಂದೊಂದು ಎಳೆಯನ್ನೂ ಜಾಗರೂಕತೆಯಿಂದ ನೆಯ್ದು ಮಾಡಿದ ಕೌದಿ ಅವರ ಸಿನಿಮಾ. ಬಾಲ್ಯದಿಂದಲೂ ಸಿನಿಮಾ ನಿರ್ವಣದ ಬಹಳಷ್ಟು ವಿಭಾಗಗಳಲ್ಲಿ ಕೆಲಸ ಮಾಡಿರುವ ನೋಲನ್​ಗೆ ಅವೆಲ್ಲ ಅನುಭವಗಳೂ ಅಮೂಲ್ಯ. ಚಿತ್ರಕಥೆಯ ಕೌಶಲದ ಬಲು ಮಜಬೂತಾದ ಕುಶಲಕರ್ವಿು ನೋಲನ್. ಸರಳವಾಗಿ ಕಥೆ ಹೇಳುವ ಬದಲು ಉದ್ದೇಶಪೂರ್ವಕವಾಗಿ ಅಸ್ಪಷ್ಟತೆಯನ್ನಿಟ್ಟು ಪ್ರತೀ ಬಾರಿ ಸಿನಿಪ್ರಿಯರು ಸಿನಿಮಾ ನೋಡಿದಾಗಲೂ ಹೊಸಹೊಸ ಅರ್ಥ ಹೊಳೆಯಿಸುವುದು ಅವರ ಕಥಾನಿರೂಪಣೆಯ ತಂತ್ರ. ಕ್ರಿಸ್ಟೋಫರ್ ನೋಲನ್ ಬಹಳಷ್ಟು ಸಿನಿಮಾಗಳ ಬರವಣಿಗೆಯನ್ನು ಸಹೋದರ ಜೊನಾಥನ್ ಜತೆ ಮಾಡಿದ್ದಾರೆ. ಬ್ಯಾಟ್​ವುನ್ ಚಿತ್ರಗಳಿಗಾಗಿ ನೋಲನ್ ಆಸಕ್ತಿ ವಹಿಸಿ ರೂಪಿಸಿದ್ದ ಬ್ಯಾಟ್​ವುನ್ ಸೂಟ್ ಮತ್ತು ಮೋಟರ್​ಬೈಕ್ ಸಾವಿರಾರು ಡಾಲರುಗಳಿಗೆ ಮಾರಾಟವಾದವು!

  ತನ್ನ ಪಾತ್ರಗಳ ಹೆಸರುಗಳಲ್ಲಿ ಏನಾದರೂ ಗುಟ್ಟು ಇಡುವುದು ನೋಲನ್​ಗೆ ಇಷ್ಟ. ‘ದ ಪ್ರೆಸ್ಟಿಜ್’ ಸಿನಿಮಾ ಮ್ಯಾಜಿಕ್​ಗೆ ಸಂಬಂಧಿಸಿದ್ದು. ಇದರಲ್ಲಿ ಅಲ್ಪೆಡ್ ಬೋರ್ಡನ್ ಮತ್ತು ರಾಬರ್ಟ್ ಆಂಜಿಯರ್. ಈ ನಾಲ್ಕೂ ಹೆಸರುಗಳ ಮೊದಲ ಅಕ್ಷರಗಳು ಅಬ್ರಾ, ಅಂದರೆ ಮ್ಯಾಜಿಕ್​ನ ಅಬ್ರಕಡಾಬ್ರಾದ ಕಿರು ಹೆಸರು. ‘ಇನ್ಸೆಪ್ಷನ್’ನಲ್ಲಿ ಐದು ಮುಖ್ಯಪಾತ್ರಗಳ ಹೆಸರಿನ ಮೊದಲ ಅಕ್ಷರಗಳು ಡ್ರೀಮ್ ಎಂದಾಗುತ್ತವೆ! ಹಿಮ್ಮುಖ ಚಲನೆಯ ಅಂಶವಿರುವ ಟೆನೆಟ್ ಸಿನಿಮಾದ ಹೆಸರೇ ಒಂದು ಪಾಲಿಂಡ್ರೋಮ್ ತಮ್ಮ ಸಿನಿಮಾಗಳಲ್ಲಿ ವೈಜ್ಞಾನಿಕವಾಗಿ ನೂರುವರ್ಷ ಮುಂದಿರುವ ನೋಲನ್ ಯಶಸ್ಸಿಗೆ ಕಾರಣ ನಿಜಜೀವನದಲ್ಲಿ ಅವರು ಬಹಳ ಸರಳವಾಗಿರುವುದು. ಇಂದಿಗೂ ಅವರು ಸ್ಮಾರ್ಟ್ ಫೋನ್ ಮತ್ತು ಇಮೇಲ್ ವಿಳಾಸ ಹೊಂದಿಲ್ಲ. ಇದರಿಂದ ಅವರ ಗಮನ ಬೇರೆಡೆ ಹೋಗದೆ ನಿರ್ದೇಶನದ ಹೊಸ ಹೊಸ ಸಾಧ್ಯತೆಗಳ ಬಗ್ಗೆ ಆಳವಾಗಿ ಯೋಚಿಸಲು ಸಮಯ ಸಿಗುತ್ತದೆ. ಅವರ ಏಕಾಗ್ರತೆಯ ಪರಿಣಾಮ ಪ್ರತಿಬಾರಿಯೂ ನೋಡುಗರು ಊಹಿಸಲಾರದ ಹೊಸಬಗೆಯ ಸಿನಿಮಾ ಎಂಬುದನ್ನು ಈ ಎರಡು ದಶಕಗಳಲ್ಲಿ ನೋಲನ್ ಸಾಬೀತುಪಡಿಸಿದ್ದಾರೆ.

  ಇವರ ಚಿತ್ರಗಳಿಗೆ ಆಸ್ಕರ್ ಸೇರಿದಂತೆ ನೂರಾರು ಮುಖ್ಯ ಪ್ರಶಸ್ತಿಗಳೆಲ್ಲ ಸಿಕ್ಕಿದರೂ ಇಂತಹ ಯಶಸ್ವೀ ಮತ್ತು ಹೊಸ ಚಿಂತನೆಯ ನಿರ್ದೇಶಕನಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿಲ್ಲ ಎಂದರೆ ಅದು ಅಚ್ಚರಿಯ ಸಂಗತಿಯೇ. ಇದಿನ್ನೂ ಐವತ್ತರ ಹರಯದ ನೋಲನ್ ಹೆಸರು ಜಗತ್ತಿನ ಶ್ರೇಷ್ಠ ನಿರ್ದೇಶಕರ ಸಾಲಿನಲ್ಲಿ ಈಗಾಗಲೇ ದಾಖಲಾಗಿದೆ ಎನ್ನುವುದೂ ಸತ್ಯ.

  (ಲೇಖಕರು ಉಪನ್ಯಾಸಕರು, ಕವಯಿತ್ರಿ)

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts