ಬಲಿಷ್ಠ ದೇಶ ನಿರ್ಮಾಣಕ್ಕೆ ಮೋದಿ ಪಣ; ಸಂಸದ ನಾರಾಯಣಸ್ವಾಮಿ

ಹಿರಿಯೂರು: ಬಲಿಷ್ಠ ಭಾರತ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.

ನಗರದ ವಾಲ್ಮೀಕಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಡತನ ನಿರ್ಮೂಲನೆ, ನೀರಾವರಿ ಹಾಗೂ ರೈತಪರ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು.

ಬಯಲು ಸೀಮೆ ಜನರ ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದು, ಕಾಲಮಿತಿಯಲ್ಲಿ ಯೋಜನೆ ಅನುಷ್ಠಾನಗೊಳ್ಳುವ ವಿಶ್ವಾಸವಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಕ್ಷ, ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿ ಬೆಳೆಯಲು ತಳಮಟ್ಟದ ಕಾರ್ಯಕರ್ತರ ಶ್ರಮವೇ ಕಾರಣ ಎಂದರು.

ಕಳೆದ ಒಂದು ವರ್ಷ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿ ಅಗತ್ಯ ಅನುದಾನ ತರಲು ಶಕ್ತಿ ಮೀರಿ ಶ್ರಮಿಸಿದ್ದು, ಸಂಸದರ ಜತೆಗೂಡಿ ಜನರ ನಿರೀಕ್ಷೆಯಂತೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಶಾಸಕಿ ಪೂರ್ಣಿಮಾ ಭರವಸೆ ನೀಡಿದರು.

ಮಾಜಿ ಶಾಸಕ ಮಸ್ಕಲ್ ರಾಮಯ್ಯ, ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಸದಸ್ಯೆ ರಾಜೇಶ್ವರಿ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಿ.ಟಿ.ಶ್ರೀನಿವಾಸ್, ತಾಲೂಕಾಧ್ಯಕ್ಷ ಕೇಶವಮೂರ್ತಿ, ಮುಖಂಡರಾದ ಜಿ.ಪ್ರೇಮ್‌ಕುಮಾರ್, ಸಿದ್ದೇಶ್‌ಯಾದವ್, ಹಾಲಪ್ಪ, ತಾಪಂ ಸದಸ್ಯರಾದ ಯಶವಂತ್, ಜಯರಾಮಯ್ಯ, ಮುರುಳಿ, ಆರಾಧ್ಯ ಇತರರಿದ್ದರು.

Leave a Reply

Your email address will not be published. Required fields are marked *