ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನ

ಹಿರಿಯೂರು: ಗಡಿನಾಡ 7ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜು.30-31ರಂದು ಆಂಧ್ರ ಪ್ರದೇಶದ ರೊಳ್ಳೆ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಗಡಿನಾಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಅಗ್ರಹಾರಂ ಶಿವಕುಮಾರ್ ತಿಳಿಸಿದರು.

ತಾಲೂಕಿನ ಗಡಿಗ್ರಾಮ ಅಮರಾಪುರಂದಲ್ಲಿ ಸೋಮವಾರ ಸಮ್ಮೇಳನದ ಅಧ್ಯಕ್ಷರಿಗೆ ಗಡಿ ನಾಡ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರ ನೇತೃತ್ವದಲ್ಲಿ ಅಧಿಕೃತ ಆಹ್ವಾನ ನೀಡಿ ಮಾತನಾಡಿದರು.

ಆಂಧ್ರ-ಕರ್ನಾಟಕದ ಗಡಿನಾಡ ಜನರ ನಡುವೆ ಭಾಷೆ, ವೈವಾಹಿಕ ಸಂಬಂಧ ಹಾಗೂ ಸಾಂಸ್ಕೃತಿಕವಾಗಿ ಸಾಮರಸ್ಯವಾದ ವಾತಾವರಣವಿದ್ದು, ಇಲ್ಲಿನ ಕನ್ನಡಿಗರನ್ನು ಒಗ್ಗೂಡಿಸುವ ಸಲುವಾಗಿ ಪ್ರತಿ ವರ್ಷ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.

ಸಾಹಿತ್ಯ ಪರಿಷತ್ ಸದಸ್ಯರು, ಅಮರಾಪುರಂ ಗ್ರಾಮದ ನಿವಾಸಕ್ಕೆ ತೆರಳಿ ಸಮ್ಮೇಳನಾಧ್ಯಕ್ಷ ರಾಮಲಿಂಗೇಶ್ವರಪ್ಪ-ನಾಗವೇಣಿ ಅವರಿಗೆ ಮೈಸೂರು ಪೇಟ ತೊಡಿಸಿ ಅಧಿಕೃತವಾಗಿ ಆಹ್ವಾನ ನೀಡಲಾಯಿತು.

ಪರಿಷತ್ ಸದಸ್ಯರಾದ ಜಯದೇವಮೂರ್ತಿ, ಚಂದ್ರಶೇಖರ್ ಗೌಡ, ಧನಂಜಯ್, ಮದ್ದಿಹಳ್ಳಿ ಮಹಾಲಿಂಗಪ್ಪ, ಪ್ರೊ.ವಿ.ವೀರಣ್ಣ, ರಾಮಚಂದ್ರಪ್ಪ, ತಿಪ್ಪೇಸ್ವಾಮಿ, ಜಯಶಂಕರ್, ಮಂಜುನಾಥ್ ಇತರರಿದ್ದರು.