More

    ಸಂವಿಧಾನ ದೇಶದ ಪವಿತ್ರ ಗ್ರಂಥ

    ಹಿರಿಯೂರು: ಬುದ್ಧನ ಚಿಂತನೆ, ಬಸವಣ್ಣನ ಸಮಾನತೆಯ ತಳಹದಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಸಮ ಸಮಾಜದ ಪರಿಕಲ್ಪನೆಯಲ್ಲಿ ರಚಿತವಾದ ಸಂವಿಧಾನ, ದೇಶದ ಪವಿತ್ರ ಗ್ರಂಥ ಎಂದು ಬಬ್ಬೂರು ತೋಟಗಾರಿಕೆ ಮಹಾವಿದ್ಯಾಲಯದ ಮುಖ್ಯಸ್ಥ ಡಾ.ಎಚ್. ನಾರಾಯಣಸ್ವಾಮಿ ಹೇಳಿದರು.

    ನಗರದ ವಾಣಿಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಡಾ.ಬಿ.ಆರ್.ಅಂಬೇಡ್ಕರ್ ಬದುಕು, ಬರಹ, ಸಾಧನೆ ಕುರಿತು ಮಾತನಾಡಿದರು.

    ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಅಸ್ಪಶ್ಯತೆ, ಅಸಮಾನತೆ, ಲಿಂಗ ತಾರತಮ್ಯ, ರೂಢಿ ಸಂಪ್ರದಾಯ, ಕಂದಾಚಾರ ಜೀವಂತವಾಗಿವೆ. ಇವುಗಳನ್ನು ಹೋಗಲಾಡಿಸುವ ಕೆಲಸ ಅಕ್ಷರವಂತರಿಂದಾಗಬೇಕಿದೆ. ಅಂಬೇಡ್ಕರ್ ವಿಶೇಷವಾಗಿ ಮಹಿಳೆಯರಿಗೆ, ದಲಿತರಿಗೆ, ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸ್ಫೂರ್ತಿಯಾಗಿದ್ದಾರೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಡಿ. ಧರಣೇಂದ್ರಯ್ಯ ಮಾತನಾಡಿ, ಅಂಬೇಡ್ಕರ್ ಸಮಾಜ ಸುಧಾರಕರಾಗಿ, ಕಾನೂನು, ಆರ್ಥಿಕ, ರಾಜಕೀಯ ಪಂಡಿತರಾಗಿ, ದಲಿತ ಹಿಂದುಳಿದ ಮತ್ತು ಮಹಿಳೆಯರ ಉದ್ಧಾರಕ್ಕಾಗಿ ಶ್ರಮಿಸಿದರು ಎಂದು ಬಣ್ಣಿಸಿದರು.

    ಸ್ವ-ಸುಧಾರಣೆ, ಸ್ವ-ನಂಬಿಕೆ, ಸ್ವ-ಏಳಿಗೆ, ಸ್ವಾವಲಂಬನೆ, ಸ್ವಾಭಿಮಾನ ಎಂಬ ಪಂಚ ಸೂತ್ರಗಳ ಮೂಲಕ ಸಮಾಜಕ್ಕೆ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಪರಿಕಲ್ಪನೆ ನೀಡಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟಾಗ ಮಾತ್ರ ದಲಿತರ ಬದುಕು ಹಸನುಗೊಳ್ಳುತ್ತದೆ ಎಂಬುದು ಅವರ ಚಿಂತನೆಯಾಗಿತ್ತು ಎಂದು ಹೇಳಿದರು.

    ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ. ರಂಗಸ್ವಾಮಿ ಸಕ್ಕರ ಮಾತನಾಡಿ, ಭೂಮಿ, ಶಿಕ್ಷಣ, ನೀರು, ರಾಷ್ಟ್ರೀಕರಣವಾಗಬೇಕು. ದೇಶದ ಪ್ರತಿಯೊಬ್ಬರಿಗೂ ಸಮವಾಗಿ ಹಂಚಿಕೆಯಾಗಬೇಕು ಎಂಬುದು ಅವರ ಆಶಯವಾಗಿತ್ತು. ಆದರೆ ಅವರ ಕನಸು ನನಸಾಗದಿರುವುದು ಬೇಸರದ ಸಂಗತಿ ಎಂದರು.

    ಆರ್.ಪುಷ್ಪಲತಾ, ದೈಹಿಕ ಶಿಕ್ಷಣ ನಿರ್ದೇಶಕ ಎಚ್. ತಿಪ್ಪೇಸ್ವಾಮಿ, ಉಪನ್ಯಾಸಕರಾದ ಎ.ಆರ್. ಶಿವರಾಜ್, ಎಸ್.ಆರ್. ಮಹಾಂತೇಶ್ ಇತರರಿದ್ದರು.

    ಬಹುಮಾನ: ಪ್ರಬಂಧ ಸ್ಪರ್ಧೆಯಲ್ಲಿ ಪಿ.ಎನ್. ಶಶಿಕುಮಾರ್, ಕೆ. ವೀಣಾ, ಟಿ. ಮನೋಜ್, ಕವನ ವಾಚನ ಸ್ಪರ್ಧೆಯಲ್ಲಿ ಬಿ.ಟಿ. ದರ್ಶನ್, ಆರ್. ಧನಲಕ್ಷ್ಮಿ, ಜಿ. ಗೀತಾ, ಆಶುಭಾಷಣ ಸ್ಪರ್ಧೆಯಲ್ಲಿ ಆರ್. ಶಶಿಧರ, ಎನ್. ಮಂಗಳಾ, ಎಂ. ಹೇಮಲತಾ, ರಸಪ್ರಶ್ನೆ ಸ್ಪರ್ಧೆಯಲ್ಲಿ ಟಿ. ಕಲಾವತಿ, ಮನೋಜ್, ಭೂತೇಶ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನದೊಂದಿಗೆ ಬಹುಮಾನ ಪಡೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts