ವ್ಯಕ್ತಿತ್ವ ವಿಕಸನಕ್ಕೆ ಧ್ಯಾನ, ನೃತ್ಯ ಸಹಕಾರಿ

ಹಿರಿಯೂರು: ಧ್ಯಾನ, ನೃತ್ಯ, ನಟನೆಯಂತಹ ಕಲಿಕಾ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ನಗರಸಭೆ ಮಾಜಿ ಸದಸ್ಯ ಜಿ. ಪ್ರೇಮ್‌ಕುಮಾರ್ ಹೇಳಿದರು.

ಇಲ್ಲಿನ ವೇದಾವತಿ ನಗರದಲ್ಲಿ ವಿವಾನ್ ಡ್ಯಾನ್ಸ್ ಕ್ಲಾಸ್ ಸಂಸ್ಥೆ ಆಯೋಜಿಸಿದ್ದ ಬೇಸಿಗೆ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಯಾವುದಾದರು ಊರುಗಳಿಗೆ ಕಳುಹಿಸಿ ವಿಶ್ರಾಂತಿ ಪಡೆಯಲಿ ಎಂಬುದು ಬಹುತೇಕ ಪಾಲಕರ ಮನೋಭಾವ. ನಗರ ಪ್ರದೇಶದಲ್ಲಿ ಮಕ್ಕಳು ಶಾಲೆ, ಓದು, ಬರಹ, ಮನೆ ಎನ್ನುವಂತಾಗಿದೆ. ಬೇಸಿಗೆಯಲ್ಲಿ ನೃತ್ಯ, ಸ್ಕೇಟಿಂಗ್, ನಟನೆ, ಕರಾಟೆ, ಚಿತ್ರಕಲೆ, ಧ್ಯಾನ, ಯೋಗ ಇತರ ಮಾನಸಿಕ ಒತ್ತಡ ನಿವಾರಿಸುವ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ, ಹೊಸ ಚೈತನ್ಯ ಕಾಣಬಹುದು ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್ ಮಾತನಾಡಿ, ಒತ್ತಡ ಜೀವನದಿಂದ ಹೊರ ಬರಲು ಹಾಗೂ ಮಾನಸಿಕ- ದೈಹಿಕ ಸದೃಢತೆಗೆ ಧ್ಯಾನ-ಯೋಗ ತರಬೇತಿ ಸಹಕಾರಿ ಎಂದರು.

ಶಿಬಿರದ ಸಂಚಾಲಕ ಎಸ್. ನವೀನ್ ಮಾತನಾಡಿ, ಶಿಬಿರದಲ್ಲಿ ಮಕ್ಕಳಿಗೆ ಒಂದು ತಿಂಗಳಲ್ಲಿ ನೃತ್ಯ, ಕ್ರಾಫ್ಟ್, ಸ್ಕೇಟಿಂಗ್, ಪ್ರಾಥಮಿಕ ನಟನೆಯ ತರಬೇತಿ, ಕರಾಟೆ, ಚಿತ್ರಕಲೆ, ಸ್ಪೋಕನ್ ಇಂಗ್ಲಿಷ್, ಧ್ಯಾನ, ಸಾಂಸ್ಕೃತಿಕ ಹಾಗೂ ವ್ಯಕ್ತಿತ್ವ ವಿಕಸನ ಸೇರಿ ಹಲವಾರು ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ನಟ ಅನಿರುದ್, ರೋಟರಿ ಕ್ಲಬ್ ಅಧ್ಯಕ್ಷ ಎಂ.ಎಸ್. ರಾಘವೇಂದ್ರ, ಉಪನ್ಯಾಸಕ ಪ್ರಕಾಶ್, ಎಂ. ಮೂಡಲಗಿರಿ ಇತರರಿದ್ದರು.