ಜೆ.ಜಿ.ಹಳ್ಳಿ ಪದವಿ ಕಾಲೇಜ್ ಸ್ಥಳಾಂತರಕ್ಕೆ ವಿರೋಧ

ಹಿರಿಯೂರು: ತಾಲೂಕಿನ ಜೆ.ಜಿ. ಹಳ್ಳಿ ಸರ್ಕಾರಿ ಪದವಿ ಕಾಲೇಜ್ ಸ್ಥಳಾಂತರ ವಿರೋಧಿಸಿ ಮಂಗಳವಾರ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಮಂಡ್ಯ ಜಿಲ್ಲೆ ಕೆಸ್ತೂರಿಗೆ ಪದವಿ ಕಾಲೇಜ್ ಸ್ಥಳಾಂತರಕ್ಕೆ ಆದೇಶ ಮಾಡಿರುವುದು ಇಲ್ಲಿನ ನೂರಾರು ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದೆ. ರಾಜ್ಯ ಸರ್ಕಾರ ತಕ್ಷಣ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಉಚಿತ ಬಸ್‌ಪಾಸ್‌ಗೆ ಒತ್ತಾಯ: ರಾಜ್ಯ ಸರ್ಕಾರ 2018-19ನೇ ಸಾಲಿನ ಬಜೆಟ್‌ನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವುದಾಗಿ ಘೋಷಿಸಿತ್ತು. ಆದರೆ ಈವರೆಗೆ ಯೋಜನೆ ಕಾರ್ಯಗತವಾಗಿಲ್ಲ. ಭೀಕರ ಬರಗಾಲ, ಡೊನೇಷನ್ ಹಾವಳಿ ಮತ್ತು ಶಿಕ್ಷಣ ಮಾರಾಟದ ವಸ್ತುವಾಗಿರುವಂತಹ ಈ ಪರಿಸ್ಥಿತಿಯಲ್ಲಿ ಹಿಂದುಳಿದ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇವರಿಗೆ ಉಚಿತ ಬಸ್‌ಪಾಸ್ ನೀಡಬೇಕೆಂದು ಎಬಿವಿಪಿ ಕಾರ್ಯಕರ್ತ ಎಚ್.ಆರ್. ಯೋಗೇಶ್ ಒತ್ತಾಯಿಸಿದರು.

ನಗರದ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಾಲೂಕು ಕಚೇರಿ ಬಳಿ ಧರಣಿ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ವಿದ್ಯಾರ್ಥಿಗಳ ಹೋರಾಟಕ್ಕೆ ನಗರಸಭೆ ಸದಸ್ಯೆ ಶಿವರಂಜಿನಿ ಮತ್ತಿತರರು ಸಾತ್ ನೀಡಿದರು.

ಹಳ್ಳಿಗಳಿಂದ ಪಟ್ಟಣಕ್ಕೆ ಉನ್ನತ ಶಿಕ್ಷಣ ಪಡೆಯಲು ಹೋಗುವ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವಿತರಿಸುವುದರಿಂದ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಕಳೆದ ವರ್ಷ ಹಣವಿಲ್ಲವೆಂಬ ನೆಪವೊಡ್ಡಿದ ರಾಜ್ಯ ಸರ್ಕಾರ ಪ್ರಸಕ್ತ ವರ್ಷ ವಿದ್ಯಾರ್ಥಿಗಳ ಬೇಡಿಕೆಯನ್ನು ಮೂಲೆ ಗುಂಪು ಮಾಡಿದೆ ಎಂದು ಎಬಿವಿಪಿ ಕಾರ್ಯಕರ್ತ ಎಚ್.ಆರ್.ಯೋಗೇಶ್ ತಿಳಿಸಿದರು.

ಎಬಿವಿಪಿ ತಾಲೂಕು ಸಂಚಾಲಕ ಶಿವಕುಮಾರ್, ಕಾರ್ಯದರ್ಶಿ ಗಿರೀಶ್, ತೇಜಸ್ವಿನಿ, ಮಾನಸ, ಜಗದೀಶ್, ಪೂಜಾ, ಭಾರ್ಗವಿ, ಶಿಲ್ಪಾ, ಕಾವ್ಯ, ನಂದನ್ ಕುಮಾರ್, ವಿಶ್ವನಾಥ್, ದರ್ಶನ್ ಇತರರಿದ್ದರು.

Leave a Reply

Your email address will not be published. Required fields are marked *