ಹಿರಿಯೂರು: ತಾಲೂಕಿನ ಹುಲಗಲಕುಂಟೆ, ಸೀಗೆಹಟ್ಟಿ ಬಳಿ ಹಾದು ಹೋಗಿರುವ ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಮಂಗಳವಾರ ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು, ರೈತರು ಪ್ರತಿಭಟನೆ ನಡೆಸಿದರು.
ಹಿರಿಯೂರು, ಯಲ್ಲದಕೆರೆ ಮಾರ್ಗವಾಗಿ ಶ್ರೀರಂಗಪಟ್ಟಣ, ಹಾಸನ, ಮೈಸೂರು ಕಡೆಗೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ರಾಜ್ಯ ಹೆದ್ದಾರಿ ಡಾಂಬರ್ ಸಂಪೂರ್ಣ ಕಿತ್ತುಹೋಗಿ ಆಳುದ್ದದ ಗುಂಡಿ ಬಿದ್ದಿವೆ. ಅನೇಕ ದ್ವಿಚಕ್ರವಾಹನ ಅಪಘಾತದಿಂದ ಸವಾರರು ಕೈ-ಕಾಲು, ಪ್ರಾಣ ಕಳೆದುಕೊಂಡಿದ್ದಾರೆ. ಕಿರಿದಾದ ರಸ್ತೆ, ಗುಂಡಿಗಳಿಂದ ಅಪಘಾತ ಸಂಖ್ಯೆ ಹೆಚ್ಚಾಗುತ್ತಿವೆ.
ಗ್ರಾಮೀಣ ಭಾಗದಿಂದ ನಿತ್ಯ ಹಿರಿಯೂರು-ಹುಳಿಯಾರು ಮಾರ್ಗವಾಗಿ ನಗರಕ್ಕೆ ಶಾಲಾ ಕಾಲೇಜು, ವ್ಯಾಪಾರ ಇತರ ಕೆಲಸಗಳಿಗಾಗಿ ಸಾರ್ವಜನಿಕರು, ವಿದ್ಯಾರ್ಥಿಗಳು ಆಟೋ ರಿಕ್ಷಾ, ಟಾಟಾ ಏಸ್, ಶಾಲಾ ವಾಹನಗಳಲ್ಲಿ ಕೈಯಲ್ಲಿ ಜೀವ ಹಿಡಿದು ಸಂಚರಿಸುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ, ರಸ್ತೆ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಸಿ. ಹೊರಕೇರಪ್ಪ, ತಾಲೂಕು ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ಸಿದ್ದರಾಮಣ್ಣ, ಶಿವಕುಮಾರ್, ಕಲ್ಪನಾ, ಶಶಿಕಲಾ, ಅಬ್ದುಲ್ ರೆಹಮಾನ್ ಇತರರಿದ್ದರು.