ಕನಸಿನ ಬೀಜ ಮನಸ್ಸಿನಲ್ಲಿ ಬಿತ್ತಿ

1 Min Read
ಕನಸಿನ ಬೀಜ ಮನಸ್ಸಿನಲ್ಲಿ ಬಿತ್ತಿ

ಹಿರಿಯೂರು: ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲೇ ಮನಸಿನಲ್ಲಿ ಕನಸುಗಳನ್ನು ಬಿತ್ತಿಕೊಂಡು ಇದರೆಡೆಗೆ ನಿರಂತರ ಪ್ರಯತ್ನ ಪಟ್ಟರೆ ನಿಶ್ಚಿತ ಗುರಿ ತಲುಪಬಹುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಮ್ಮ ಹೇಳಿದರು.

ತಾಲೂಕಿನ ಹೊಸ ಯಳನಾಡು ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾರದಾ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಬದುಕಿನ ಬಗ್ಗೆ ಉತ್ಸಾಹ ಮತ್ತು ಕ್ರಿಯಾಶೀಲತೆ ಹೊಂದಿರಬೇಕು. ಗುರು ಹಿರಿಯರ ಮಾತುಗಳಿಗೆ ಮನ್ನಣೆ ನೀಡಬೇಕು. ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹಿಳೆಯರು ಅಬಲೆಯರಲ್ಲ. ಅವರಲ್ಲೂ ಅಪಾರ ಶಕ್ತಿ ಇದೆ. ಎಲ್ಲ ಕೆಲಸವನ್ನೂ ಮಾಡುವ ಚೈತನ್ಯ, ಯುಕ್ತಿ ಇದೆ. ಸ್ತ್ರೀಯರು ಕೀಳರಿಮೆ ಬಿಟ್ಟು ಸಮಾಜದ ಏಳ್ಗೆಗೆಗೆ ಶ್ರಮಿಸಬೇಕು. ಹೀಗಾದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

ಶಾಲೆಯ ಮಹಾಪೋಷಕ ನಾ.ತಿಪ್ಪೇಸ್ವಾಮಿ ಮಾತನಾಡಿ, ಪ್ರಾಮಾಣಿಕತೆ ಹಾಗೂ ಪರಿಶ್ರಮವಿದ್ದರೆ ಏನು ಬೇಕಾದರೂ ಸಾಧಿಸಬಹುದು. ಹಾಲು ತುಪ್ಪವಾಗಲು, ಕಬ್ಬು ಸಕ್ಕರೆ ಬೆಲ್ಲವಾಗಲು ಸಮಯ ತೆಗೆದುಕೊಳ್ಳುತ್ತದೆ. ಹೀಗೆಯೇ ಬದುಕು ಭದ್ರವಾಗಲು ಕಾಲ ಬೇಕಾಗುತ್ತದೆ. ಇದಕ್ಕಾಗಿ ನಿರಂತರ ಶ್ರಮಿಸಬೇಕು ಎಂದರು.

ಬಳಿಕ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ಚಟುವಟಿಕೆ ವೀಕ್ಷಿಸಿದರು. ಪ್ರಾಂಶುಪಾಲ ಚಂದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಎಚ್.ತಿಪ್ಪೇಸ್ವಾಮಿ, ಎಸ್.ನಿಜಲಿಂಗಪ್ಪ, ಕೆ.ಟಿ.ನಾಗೇಂದ್ರಪ್ಪ, ಕೆ.ಎಂ.ಜಗನ್ನಾಥ್, ಕೆ.ಟಿ.ಇಂದ್ರಪ್ಪ, ಎಂ.ಸಿ.ಶಿವು ಇತರರಿದ್ದರು.

See also  ಭದ್ರಾ ಲಾಭ ಪಡೆಯಲು ಪೈಪೋಟಿ: ಮಾಜಿ ಸಿಎಂ ಕುಮಾರಸ್ವಾಮಿ ಆರೋಪ
Share This Article