ಯುವ ಜನ ಆಯೋಗ ಸ್ಥಾಪನೆಗೆ ಒತ್ತಾಯ

ಹಿರಿಯೂರು: ಸಾಮಾಜಿಕ ಅಸಮಾನತೆ ಹೋಗಲಾಡಿಸಿ ಸಮಾನತೆ ಸ್ಥಾಪಿಸಲು ರಚನಾತ್ಮಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಯುವಜನ ಆಯೋಗ ಸ್ಥಾಪನೆ ಅವಶ್ಯವಿದೆ ಎಂದು ಗಿರೀಶ ಬಿ.ಇಡಿ. ಕಾಲೇಜು ಪ್ರಾಂಶುಪಾಲ ಡಾ. ಸುಧಾ ಹೇಳಿದರು.

ರಾಜ್ಯದಲ್ಲಿ ಯುವಜನ ಆಯೋಗ ಸ್ಥಾಪಿಸುವಂತೆ ಒತ್ತಾಯಿಸಿ, ಯುವ ಮುನ್ನಡೆ, ಜನವಿಕಾಸ ವೇದಿಕೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗಿರೀಶ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಯೂತ್ ಅವರ್ (ಯುವ ಸಮಯ) ಮಾತು, ಚರ್ಚೆ, ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಬುದ್ಧತೆ ಕಡೆಗೆ ವೇಗದ ಚಲನೆ ಹೊಂದಿರುವ ಯುವ ಸಮೂಹ ಉತ್ತಮ ಸೇವಾ ಕಾರ್ಯಗಳಲ್ಲಿ ತಮ್ಮ ಸಮಯ ವಿನಿಯೋಗಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಚಮನ್‌ಷರೀಫ್ ಮಾತನಾಡಿ, ಯುವ ಜನಾಂಗ ಪ್ರಪಂಚದ ವ್ಯವಸ್ಥೆಗಳ ಕುರಿತು ತೃಪ್ತಿ ಹೊಂದಿಲ್ಲ ಎಂಬುದು ನಗ್ನ ಸತ್ಯ. ಸಮಾಜದ ಹಿತಕ್ಕಿಂತ ಸ್ವಸುಖವೇ ಪ್ರಮುಖವಾಗಿದೆ. ಮಾದಕ ದ್ರವ್ಯ ಸೇವನೆ, ನೈತಿಕ ಮೌಲ್ಯಗಳ ಅಧಃಪತನದಿಂದ ಯುವ ಜನಾಂಗದಲ್ಲಿನ ಗೌರವ ಭಾವ ಅಳಿಯುತ್ತಿದೆ. ಎಲ್ಲ ಆದರ್ಶಗಳು ಹೊಗೆಯ ಮೋಡಗಳಾಗಿವೆ. ಇವೆಲ್ಲದರ ಮೂಲಕ ಕಾರಣ ಹುಡುಕಿದರೆ, ಸೂಕ್ತ ಮಾರ್ಗದರ್ಶನದ ಕೊರತೆ, ಇಂದಿನ ಶಿಕ್ಷಣ ಪದ್ಧತಿ ಪರಿಪೂರ್ಣ ಎನಿಸದಿದ್ದರೂ ಅದಕ್ಕಿಂತ ಅಗತ್ಯವೆನಿಸಿದ ಮಾರ್ಗದರ್ಶನದ ಅಸಮತೋಲನವಿದೆ. ತಾವು ಯಾವುದನ್ನು ಕಲಿಯಬೇಕು ಕಲಿತದ್ದನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದರ ಅಸ್ಥಿರತೆ ಯುವಕರಲ್ಲಿದೆ. ಶಿಸ್ತು ಬದ್ಧ ಬದುಕು ರೂಪಿಸಿಕೊಳ್ಳಲು ಯುವಜನರಿಗೂ ಹಕ್ಕುಗಳಿವೆ ಎನ್ನುವುದನ್ನು ಒಪ್ಪಿ ಸರ್ಕಾರ ಯುವಜನ ಆಯೋಗ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಮಾತು, ಸಂವಾದ, ಚರ್ಚೆ ಘೋಷಣೆಗಳ ಮೂಲಕ ಯುವಜನ ಆಯೋಗ ರಚಿಸುವಂತೆ ಸರ್ಕಾರವನ್ನು ಆಗ್ರಹಿಸಲಾಯಿತು.