ಹಿರಿಯೂರು: ಕಡಲೆ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ, ಖರೀದಿ ಕೇಂದ್ರ ತೆರೆಯುವಂತೆ ರೈತರು ಒತ್ತಾಯಿಸಿದ್ದಾರೆ.
ಕಡಲೆ ಬಯಲು ಸೀಮೆಯ ಪ್ರಮುಖ ಬೆಳೆಯಾಗಿದ್ದು, ಕಳೆದ ಐದಾರು ವರ್ಷ ಭೀಕರ ಬರ, ಮಳೆ ಕೊರತೆಯಿಂದ ರೈತರು ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಿಸಿದ್ದು, ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ಕಡಲೆ ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ. ಆದರೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಇಲ್ಲ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಬೆಂಬಲ ಬೆಲೆ ನಿಗದಿಪಡಿಸಿ, ಕಡಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ತಾಲೂಕಿನ ವಿವಿಧೆಡೆ ಸಾವಿರಾರು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಕಡಲೆ ಕೊಯ್ಲು ಆರಂಭಗೊಂಡಿದೆ. ಈ ಬಾರಿ ಉತ್ತಮ ಇಳುವರಿ ಬರುವ ನಿರೀಕ್ಷೆ ಇದ್ದು, ಇಂತಹ ಸಮಯದಲ್ಲಿ ಏರಿಕೆಯಾಗಬೇಕಿದ್ದ ಕಡಲೆ ದರ 3000-3500 ಕ್ಕೆ ಕುಸಿದಿದೆ.
ಮಿತಿ ಸಡಿಲಗೊಳಿಸಿ: ಕಡಲೆ ಖರೀದಿ ಕೇಂದ್ರದಲ್ಲಿ ಒಬ್ಬ ರೈತನಿಂದ ಕೇವಲ 15 ಕ್ವಿಂಟಲ್ ಖರೀದಿಸಲು ಮಿತಿಗೊಳಿಸಿರುವುದು ಅವೈಜ್ಞಾನಿಕವಾಗಿದೆ. ಈ ಬಾರಿ ಒಂದು ಎಕರೆಗೆ 7-8 ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆ ಇದ್ದು, 15 ಕ್ವಿಂಟಲ್ ಮಿತಿ ರದ್ದುಗೊಳಿಸಿ, ಬೆಳೆಯನ್ನು ಪೂರ್ಣಪ್ರಮಾಣದಲ್ಲಿ ಖರೀದಿಸಲು ಅವಕಾಶ ನೀಡಬೇಕು. ಕನಿಷ್ಠ 4800 ರೂ. ಬೆಲೆ ನಿಗದಿಪಡಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ.
ಬಿತ್ತನೆ ವಿವರ: ತಾಲೂಕಿನ ವಿವಿಧೆಡೆ 11945 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದ್ದು, ಐಮಂಗಲ ಹೋಬಳಿ 8090, ಕಸಬಾ 1345 ಹೆಕ್ಟೇರ್, ಧರ್ಮಪುರ-ಜೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ.