ಜಲಾಶಯವಿದ್ದರೂ ತಪ್ಪಿಲ್ಲ ಜಲ ಸಂಕಟ

ಹಿರಿಯೂರು: ತಾಲೂಕಿನಲ್ಲಿ ಎರಡು ಜಲಾಶಯಗಳಿದ್ದರೂ ಬೇಸಿಗೆಗೂ ಮುನ್ನವೇ ಕುಡಿವ ನೀರಿನ ಅಭಾವ ಸೃಷ್ಟಿಯಾಗಿದ್ದು, ಹನಿ ನೀರಿಗೆ ಜನ-ಜಾನುವಾರು ಪರದಾಡುವಂತಾಗಿದೆ.

ಸತತ ಐದಾರು ವರ್ಷ ಮಳೆ ಕೊರತೆಯಿಂದ ಅಂತರ್ಜಲ ಕುಸಿದು ಕೊಳವೆಬಾವಿ ಬತ್ತಿವೆ. 800-1000 ಅಡಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಅದೃಷ್ಟವಶಾತ್ ನೀರು ದೊರೆತರೂ, 10-15 ದಿನಗಳಲ್ಲಿ ಖಾಲಿಯಾಗುತ್ತದೆ.
ತಾಲೂಕಿನ ಯಳನಾಡು, ಹುಚ್ಚವ್ವನಹಳ್ಳಿ, ಖಂಡೇನಹಳ್ಳಿ, ಹಲಗಲದ್ದಿ, ಪಟ್ರೇಹಳ್ಳಿ ಹಾಗೂ ಧರ್ಮಪುರ ಸೇರಿ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಮಸ್ಯೆ ಉಲ್ಬಣಿಸಿದೆ. ತಾಲೂಕು ಆಡಳಿತದ ಪ್ರಯತ್ನ ಸಾಕಾಗುತ್ತಿಲ್ಲ.

ವೇದಾವತಿ, ಗಾಯತ್ರಿ ಜಲಾಶಯದ ನದಿ ಪಾತ್ರದಲ್ಲೂ ಸಮಸ್ಯೆ ಭಿನ್ನವಾಗಿಲ್ಲ. ಆ ಭಾಗದಲ್ಲೂ ಕೊಳವೆಬಾವಿ ಅವಲಂಭಿಸುವಂತಾಗಿದೆ. ತಾಲೂಕು ಆಡಳಿತ ಪರಿಹಾರೋಪಾಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಟ್ಯಾಂಕರ್‌ಗೆ ಬೇಡಿಕೆ: ಕಳೆದ ವರ್ಷ ಬೇಸಿಗೆಯಲ್ಲಿ ತಾಲೂಕು ಆಡಳಿತ ಟ್ಯಾಂಕರ್ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಕುಡಿವ ನೀರು ಸರಬರಾಜು ಮಾಡಿತ್ತು. ಟ್ಯಾಂಕರ್ ಮಾಲೀಕರಿಗೆ ಬಾಡಿಗೆ ಬಿಲ್ ಪಾವತಿ ವಿಳಂಬವಾದ ಹಿನ್ನೆಲೆ, ನೀರು ಪೂರೈಕೆಗೆೆ ಆಸಕ್ತಿ ತೋರುತ್ತಿಲ್ಲ.