ಹಿರಿಯೂರು: ರೈತರ ಹಿತ ಕಾಯಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಬಜೆಟ್‌ನಲ್ಲಿ ರೈತ ಸ್ನೇಹಿ ಯೋಜನೆಗಳಿಗೆ ಆದ್ಯತೆ ನೀಡುವ ನಿರೀಕ್ಷೆ ಇದೆ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ತಾಲೂಕಿನ ಬಬ್ಬೂರಿನಲ್ಲಿ ಸೋಮವಾರ ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ರೈತರ ಜೀವನಾಡಿ ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ವಿಶೇಷ ಯೋಜನೆ ರೂಪಿಸಿದ್ದು, ಬಯಲು ಸೀಮೆಯ ಎಲ್ಲ ಕೆರೆಗಳಿಗೆ ನೀರಾವರಿ ಸೌಲಭ್ಯ ಸಿಗುವ ನಿರೀಕ್ಷೆ ಇದೆ ಎಂದರು.
ಮಿತಿ ಹೆಚ್ಚಳಕ್ಕೆ ಮನವಿ: ರೈತರಿಂದ ಗರಿಷ್ಠ 10 ಕ್ವಿಂಟಾಲ್ ಕಡಲೆ ಖರೀದಿಸಲು ನಿಗದಿಪಡಿಸಿದ್ದು, ಈ ಮಿತಿಯನ್ನು 20 ಕ್ವಿಂಟಾಲ್‌ಗೆ ಹೆಚ್ಚಿಸುವಂತೆ ರೈತರು ಬೇಡಿಕೆ ಇಟ್ಟಿದ್ದಾರೆ. ಈ ವಿಚಾರವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ತಾಪಂ ಸದಸ್ಯ ಯಶವಂತರಾಜ್ ಮಾತನಾಡಿ, ತಾಲೂಕಿನ ರೈತರ ಅನುಕೂಲಕ್ಕೆ ಕಡಲೆ ಖರೀದಿ ಕೇಂದ್ರ ಸ್ಥಾಪಿಸಿರುವುದು ಸ್ವಾಗತಾರ್ಹ. ಪ್ರಸಕ್ತ ವರ್ಷ ಕಡಲೆ ಬೆಳೆ ಉತ್ತಮ ಇಳುವರಿ ಬಂದಿದ್ದು, 1 ಎಕರೆಗೆ 3 ಕ್ವಿಂಟಾಲ್‌ನಂತೆ 3 ಎಕರೆಗೆ 10 ಕ್ವಿಂಟಾಲ್ ಮಾತ್ರ ಖರೀದಿಸಲು ಮಿತಿಗೊಳಿಸಿರುವುದು ಅವೈಜ್ಞಾನಿಕ ಕ್ರಮ ಎಂದರು.
ಗ್ರಾಪಂ ಅಧ್ಯಕ್ಷೆ ಮಂಜುಳಾ, ಎಪಿಎಂಸಿ ಅಧ್ಯಕ್ಷ ಜಗನ್ನಾಥ್, ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಜಿಪಂ ಸದಸ್ಯೆ ರಾಜೇಶ್ವರಿ, ಕೃಷಿ ಇಲಾಖೆ ಅಧಿಕಾರಿ ಉಷಾದೇವಿ, ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ, ವಕೀಲ ಸುರೇಶ್, ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್ ದ್ಯಾಮಣ್ಣ ಇತರರಿದ್ದರು.