ಹಿರಿಯೂರು: ಗ್ರಾಮ ಸಭೆಯಲ್ಲಿ ನಿಗದಿಪಡಿಸಿ ಫಲಾನುಭವಿಗಳಿಗೆ ವಸತಿ ಯೋಜನೆಯಡಿ ಮನೆ ನೀಡದೆ, ಅನರ್ಹರಿಗೆ ವಿತರಿಸಲಾಗಿದೆ ಎಂದು ಆರೋಪಿಸಿ ಸೌಲಭ್ಯ ವಂಚಿತರು ಶುಕ್ರವಾರ ತಾಲೂಕಿನ ಅಬ್ಬಿನಹೊಳೆ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
2016, 2017 ಹಾಗೂ 2018ನೇ ಸಾಲಿನಲ್ಲಿ ವಸತಿ ಯೋಜನೆಯಡಿ ಮನೆ ವಿತರಿಸುವ ಕುರಿತು ಗ್ರಾಮ ಸಭೆ ನಡೆಸಿ ಫಲಾನುಭವಿಗಳಿಗೆ ಸಂಕೇತದ ಕೋಡ್ ಸಂಖ್ಯೆ ನೀಡಲಾಗಿತ್ತು. ಹೆಸರು ಮತ್ತು ಕೋಡ್ ಸಂಖ್ಯೆ ಬದಲಿಸಿ, ಫಲಾನುಭವಿಗಳನ್ನು ಹೊರತುಪಡಿಸಿ ಅನ್ಯರಿಗೆ ನಿವೇಶನ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದರು.
ಒಂದೇ ಕುಟುಂಬದ ಮೂವರಿಗೆ ಮನೆ ಹಂಚಿಕೆ ಮಾಡಿರುವುದು ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಗ್ರಾಮ ಸಭೆಯಲ್ಲಿ ಮಂಜೂರಾದ 34 ಮನೆಗಳ ಪೈಕಿ 20 ಮನೆಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ. ಈ ಕೃತ್ಯದಲ್ಲಿ ಭಾಗಿಯಾದವರ ವಿರುರ್ದಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಪಂ ಇಒ ರಾಮಕುಮಾರ್, ಕುಲ್ದೀಪ್ ಇತರರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇಒ ಅವರ ಕಾರು ಅಡ್ಡಗಟ್ಟಿದ ಪ್ರಸಂಗವೂ ನಡೆಯಿತು. ನ್ಯಾಯ ಸಿಗುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು.
ದೇವರಕೊಟ್ಟ, ಕಂಬತ್ತನಹಳ್ಳಿ, ಗೂಳ್ಯ, ಹೊಸಹಳ್ಳಿ, ಅಬ್ಬಿನಹೊಳೆ, ಚಿಲ್ಲಹಳ್ಳಿ ಹಾಗೂ ಯಳಗೊಂಡನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.