More

    ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಯೋಜನೆ ಜಾರಿ

    ಹಿರಿಯೂರು: ವಿವಿಧ ಯೋಜನೆಯ ಹಣವನ್ನು ದೇಶದ ಯಾವುದೇ ಮೂಲೆಯಲ್ಲೂ ವಾಸಿಸುವ ಕಟ್ಟಕಡೆಯ ನಾಗರಿಕನ ಸ್ವಂತ ಖಾತೆಗೆ ತ್ವರಿತವಾಗಿ ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಂಚೆ ಇಲಾಖೆ ಮೂಲಕ ‘ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಯೋಜನೆ ಜಾರಿಗೆ ತಂದಿದೆ ಎಂದು ಜಿಲ್ಲಾ ಅಂಚೆ ಅಧೀಕ್ಷಕ ಶಿವರಾಜ್ ಕಂಡಿಮಠ್ ತಿಳಿಸಿದರು.

    ತಾಲೂಕಿನ ಗಡಿಗ್ರಾಮ ಖಂಡೇನಹಳ್ಳಿಯ ಉಪಅಂಚೆ ಕಚೇರಿಯಿಂದ ಸೋಮವಾರ ಏರ್ಪಡಿಸಿದ್ದ ‘ಆರ್ಥಿಕ ಸೇರ್ಪಡೆ’ ಶಿಬಿರದಲ್ಲಿ ಮಾತನಾಡಿದರು.

    ಆಧಾರ್‌ಕಾರ್ಡ್, ಮೊಬೈಲ್ ಸಂಖ್ಯೆಯಂತಹ ಕನಿಷ್ಠ ದಾಖಲಾತಿ ಪಡೆದು ತ್ವರಿತವಾಗಿ ಗ್ರಾಹಕರಿಗೆ ಖಾತೆ ತೆರೆಯುವುದು, ವಿಧವಾ, ವೃದ್ಧಾಪ್ಯ ಮುಂತಾದ ಸರ್ಕಾರಿ ಯೋಜನೆ ಹಣ ಪಾವತಿ, ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ವಿತರಣೆ, ಗ್ರಾಮೀಣ ಭಾಗದ ಗ್ರಾಹಕರು ರಾಷ್ಟ್ರೀಕೃತ ಬ್ಯಾಂಕ್‌ನ ಚಾಲ್ತಿ ಖಾತೆಯಲ್ಲಿಟ್ಟಿರುವ ಹಣದ ಪೈಕಿ ಗರಿಷ್ಠ ಐದು ಸಾವಿರ ರೂ. ಗಳವರೆಗೆ ತತ್‌ಕ್ಷಣಕ್ಕೆ ನೀಡುವಂತಹ ಸೌಲಭ್ಯವನ್ನು ಈ ಯೋಜನೆ ಹೊಂದಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಖಾತೆ ತೆರೆದು ಯೋಜನೆ ಉತ್ತೇಜಿಸುವ ಜತೆಗೆ ತಾವೂ ಹಣ ಉಳಿತಾಯ ಮಾಡುವುದನ್ನು ರೂಢಿಸಿಕೊಳ್ಳಬೇಕೆಂದು ಮನವಿ ಮಾಡಿದರು.

    ಅಂಚೆ ನಿರೀಕ್ಷಕ ಕೆಂಚಪ್ಪ ಮಾತನಾಡಿ, ಖಂಡೇನಹಳ್ಳಿ ಉಪ ಅಂಚೆಕಚೇರಿ ಸಿಬ್ಬಂದಿ ಗ್ರಾಹಕರ ಮನವೊಲಿಸಿ ಕಡಿಮೆ ಅವಧಿಯಲ್ಲಿ 198 ಅಕೌಂಟ್ ತೆರೆದಿದೆ. ಈ ಯೋಜನೆಯಡಿ ಅನಕ್ಷರಸ್ಥರೂ ಕೂಡ ಸುರಕ್ಷಿತವಾಗಿ ಹಣ ಪಾವತಿ ಹಾಗೂ ಹಿಂಪಡೆಯಬಹುದಾಗಿದೆ. ಅಂಚೆ ಇಲಾಖೆ ಮತ್ತೊಂದು ಯೋಜನೆ ‘ಗ್ರಾಮೀಣ ಅಂಚೆ ವಿಮೆಯಡಿ ಗ್ರಾಹಕರಿಗೆ ಹೆಚ್ಚಿನ ಬೋನಸ್ ಲಭಿಸುತ್ತದೆ ಎಂದು ತಿಳಿಸಿದರು.

    ಐಪಿಪಿಬಿ ಯೋಜನಾಧಿಕಾರಿ ಮಂಜುನಾಥ್ ಮಾತನಾಡಿ, ಇದೊಂದು ಹೆಚ್ಚಿನ ಷರತ್ತುಗಳಿಲ್ಲದ ಸರಳ ರೀತಿಯ ಸುರಕ್ಷಿತ ಯೋಜನೆಯಾಗಿದೆ. ಪ್ರತಿಯೊಬ್ಬರನ್ನು ಬ್ಯಾಂಕ್ ವ್ಯವಸ್ಥೆಯಡಿ ತರುವುದು ಕೇಂದ್ರ ಸರ್ಕಾರದ ಉದ್ದೇಶ. ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಯೋಜನೆಯಡಿ ಪಾಸ್‌ಪುಸ್ತಕ ನೀಡುವುದಿಲ್ಲ. ಫೋನ್, ಕರೆಂಟ್, ಟಿವಿ ಬಿಲ್ ಸೇರಿದಂತೆ ಹಲವು ಬಗೆಯ ಪಾವತಿಗಳನ್ನು ಈ ಯೋಜನೆಯಡಿ ಮಾಡಬಹುದು. ಒಂದೇ ಮೊಬೈಲ್ ಸಂಖ್ಯೆ ನೀಡಿ ಗರಿಷ್ಠ ಐದು ಮಂದಿ ಅಕೌಂಟ್ ತೆರೆಯಬಹುದು ಎಂದು ತಿಳಿಸಿದರು.

    ಗ್ರಾಪಂ ಅಧ್ಯಕ್ಷ ಸುನಿತಾ ಮಂಜುನಾಥ್, ಕಾಂತರಾಜ್, ಡಾ.ವಿ. ವೀರಣ್ಣ, ನಾರಾಯಣ್, ನಾಗರಾಜ್, ಸುನಿತಾ, ಶಶಿಧರ, ಟಿ. ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts