ಹಿರಿಯೂರು: ಸಂವಿಧಾನ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿದ್ದು, ಸೌಹಾರ್ದತೆ ಅದರ ಮೂಲ ಉದ್ದೇಶ ಮತ್ತು ಬುನಾದಿ ಎಂದು ಪ್ರಾಂಶುಪಾಲ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.
ಇಲ್ಲಿನ ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಭೀಮಾ ಕೊರೆಂಗಾವ್ ವಿಜಯೋತ್ಸವ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿನ ಶೋಷಣೆ, ಅಸ್ಪೃಶ್ಯತೆ, ತಾರತಮ್ಯ ವಿರುದ್ಧದ ಧ್ವನಿಯಾಗಿ ಭೀಮಾ ಕೊರೆಂಗಾವ್ ವಿಜಯೋತ್ಸವ ಆಚರಿಸಲಾಗುತ್ತಿದೆ. ಇತಿಹಾಸದ ಪುಟಗಳಲ್ಲಿ ಏನೂ ಇಲ್ಲದವರು, ಉಳ್ಳವರ ವಿರುದ್ಧ ನಡೆಸಿದ ಎಷ್ಟೋ ಹೋರಾಟಗಳು ದಾಖಲಾಗದೆ ಉಳಿದು ಹೋಗಿವೆ ಎಂದು ಬೇಸರಿಸಿದರು.
1818ರ ಜ.1ರಂದು ಪೇಶ್ವೆಗಳ ವಿರುದ್ಧ ಸಿಡಿದೆದ್ದ ಕೊರೆಂಗಾವ್ ದಲಿತ ಯೋಧರು, ಅಸ್ಪೃಶ್ಯತೆಯ ವಿರುದ್ಧದ ದೊಡ್ಡ ಹೋರಾಟದಲ್ಲಿ ಗೆಲುವು ಸಾಧಿಸಿದ್ದು, ಇಂದಿಗೆ 202 ವರ್ಷಗಳು ಕಳೆದಿವೆ ಎಂದು ಸ್ಮರಿಸಿದರು.
ವಿದ್ಯಾಸಂಸ್ಥೆ ಕಾರ್ಯದರ್ಶಿ ಶಾಂತಮ್ಮ, ಉಪನ್ಯಾಸಕರಾದ ಕೆ.ರಂಗಪ್ಪ, ಎಚ್.ಆರ್.ಲೋಕೇಶ್, ಇ.ನಾಗೇಂದ್ರಪ್ಪ, ಶಾಂತಕುಮಾರ್, ರಜಾಕ್‌ಸಾಬ್, ಮಂಜು, ಶಿಕ್ಷಕಿಯರಾದ ವೈಶಾಲಿ, ಒ.ಪಿ.ಪುಷ್ಪಾ ಇತರರಿದ್ದರು.