ವಿವಿ ಸಾಗರ-ಗಾಯತ್ರಿ ಜಲಾಶಯಕ್ಕಿಲ್ಲ ರಕ್ಷಣೆ

ಹಿರಿಯೂರು: ಬಯಲು ಸೀಮೆಯ ಏಕೈಕ ದೊಡ್ಡ ಜಲಾಶಯ ವಿವಿ ಸಾಗರಕ್ಕೆ ಸೂಕ್ತ ಭದ್ರತಾ ಒದಗಿಸಿಲ್ಲ. ಯಾರು ಬೇಕಾದರೂ ಮುಕ್ತವಾಗಿ ಪ್ರವೇಶಬಹುದು.

1907ರಲ್ಲಿ ನಿರ್ಮಾಣಗೊಂಡಿರುವ ವಾಣಿ ವಿಲಾಸ ಸಾಗರ, ಚಿತ್ರದುರ್ಗ ಜಿಲ್ಲೆಯ ಪ್ರಮುಖ ಜಲಮೂಲ. ಕೃಷಿ ಸಂಸ್ಕೃತಿ ಮಹಾಪೋಷಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ಕಾಲದಲ್ಲಿ ಬಯಲು ಸೀಮೆಗೆ ನೀಡಿದ ಕೊಡುಗೆ ಈ ಜಲಾಶಯ.

ಇದು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವೂ ಹೌದು. ಇಲ್ಲಿಗೆ ರಾಜ್ಯದೆಲ್ಲೆಡೆಯಿಂದ ಪ್ರತಿ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಜಲಾಶಯದ ಭದ್ರತೆಗೆ ಕೇವಲ ಇಬ್ಬರು ಗುತ್ತಿಗೆ ಸಿಬ್ಬಂದಿ ನೇಮಿಸಿದ್ದು, ಇವರ ಜತೆಗೆ ಪ್ರವಾಸಿ ಮಿತ್ರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರವಾಸಿಗರನ್ನು ತಪಾಸಣೆ ಮಾಡಿ ಒಳಬಿಡುವ ವ್ಯವಸ್ಥೆ ಇಲ್ಲ. ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲೂ ಭದ್ರತೆ ಕಾರ್ಯ ಕೈಗೊಳ್ಳದಿರುವುದು ಆತಂಕ ಉಂಟು ಮಾಡಿದೆ.

ಭದ್ರತೆ ದೃಷ್ಟಿಯಿಂದ ಸಿಸಿ ಟಿವಿ, ಹೆಚ್ಚು ಭದ್ರತಾ ಸಿಬ್ಬಂದಿ ನೇಮಕ, ಪ್ರವಾಸಿಗರ ತಪಾಸಣೆಗೆ ವ್ಯವಸ್ಥೆ ಕಲ್ಪಿಸಿಲ್ಲ. ಹಸಿರು ಕಣಿವೆ ಗುಡ್ಡಗಳ ಸುಂದರ ಪರಿಸರ ಇರುವುದರಿಂದ ಇಲ್ಲಿ ವಿವಾಹ ಪೂರ್ವ ಪೋಟೋ ಶೂಟಿಂಗ್, ಸಿನಿಮಾ ಇತರ ಚಿತ್ರೀಕರಣಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ.

ಗಾಯತ್ರಿ ಜಲಾಶಯ: ಹಿರಿಯೂರು ತಾಲೂಕಿನ ಜೆ.ಜಿ.ಹಳ್ಳಿ ಹೋಬಳಿಯ ಕರಿಯಾಲ ಗ್ರಾಮ ಸಮೀಪ 1963ರಲ್ಲಿ ಗಾಯತ್ರಿ ಜಲಾಶಯ ನಿರ್ಮಿಸಲಾಗಿದೆ. ಇಲ್ಲೂ ಭದ್ರತಾ ಸಿಬ್ಬಂದಿ ನೇಮಕ, ಸಿಸಿ ಟಿವಿ ಅಳವಡಿಕೆ ಸೇರಿ ಯಾವುದೇ ಭದ್ರತಾ ಕ್ರಮ ಇಲ್ಲ.

Leave a Reply

Your email address will not be published. Required fields are marked *