ನಗರಸಭೆ ಗದ್ದುಗಾಗಿ ರಣತಂತ್ರ

ಹಿರಿಯೂರು: ನಗರಸಭೆ ಗದ್ದುಗೆ ಹಿಡಿಯಲು ಮೈತ್ರಿ ಪಕ್ಷ ಮತ್ತು ಬಿಜೆಪಿ ರಣತಂತ್ರ ರೂಪಿಸಿವೆ.

ಈ ಬಾರಿ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಬಿಜೆಪಿ ಪ್ರಯತ್ನಕ್ಕೆ ಕೈ ಹಾಕಿದೆ. ವಿಧಾನಸಭೆ-ಲೋಕಸಭೆ ಚುನಾವಣೆ ನಂತರ ದಿಢೀರ್ ಎದುರಾಗಿರುವ ಚುನಾವಣೆ ಇದಾಗಿದೆ.

ಮೇ 23ರ ಲೋಕಸಭಾ ಚುನಾವಣೆ ಫಲಿತಾಂಶದ ಛಾಯೆ ನಗರಸಭೆ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಗರ ವ್ಯಾಪ್ತಿಯ ಪ್ರಜ್ಞಾವಂತ ಮತದಾರರು ಬಿಜೆಪಿ ಬೆಂಬಲಿಸಲಿದ್ದಾರೆ ಎಂಬ ಅಭ್ಯರ್ಥಿಗಳ ವಿಶ್ವಾಸ ಸತ್ಯವಾಗುತ್ತದೆ.

ದೋಸ್ತಿ-ಕಮಲ ಜಿದ್ದಾಜಿದ್ದಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷ 31, ಬಿಜೆಪಿ 30 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಕುತೂಹಲ ಮೂಡಿಸಿದೆ. ದೋಸ್ತಿ ನಡುವಿನ ಹೊಂದಾಣಿಕೆ ಮತ್ತು ಜಾತಿ ಲೆಕ್ಕಾಚಾರದ ಮೇಲೆ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆ ಮಾಜಿ ಸಚಿವ ಡಿ.ಸುಧಾಕರ್ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ್ ಮೇಲಿದೆ.

ಸ್ವಂತ ಬಲದ ವಿಶ್ವಾಸ: ಪಕ್ಷೇತರ, ಮೈತ್ರಿ ಪಕ್ಷದ ಸದಸ್ಯರನ್ನು ಸೆಳೆದು ನಗರಸಭೆಯಲ್ಲಿ ಮೊದಲ ಬಾರಿಗೆ ಅಧಿಕಾರ ಚುಕ್ಕಾಣಿ ಹಿಡಿದು ಇತಿಹಾಸ ನಿರ್ಮಿಸಿರುವ ಬಿಜೆಪಿ, ಈ ಬಾರಿ ಸ್ವತಂತ್ರವಾಗಿ ಅಧಿಕಾರ ಗದ್ದುಗೆ ಹಿಡಿಯಲು ಪ್ರಯತ್ನಿಸುತ್ತಿದೆ.

ಹೆಚ್ಚಿದ ಪಕ್ಷೇತರ ಅಭ್ಯರ್ಥಿಗಳು: ಈ ಬಾರಿ ಪಕ್ಷೇತರ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಗೆ ಇಳಿದಿರುವುದು ಪಕ್ಷಗಳಿಗೆ ತಲೆ ನೋವಾಗಿದೆ. 109 ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ. ಇವರನ್ನು ಸಮಾಧಾನ ಪಡಿಸುವ ಪ್ರಯತ್ನಕ್ಕೆ ಬಿಜೆಪಿ, ಕಾಂಗ್ರೆಸ್ ಕೈ ಹಾಕಿವೆ.

ಅಭಿವೃದ್ಧಿಯೇ ಶ್ರೀರಕ್ಷೆ: ನಗರದಲ್ಲಿ ಕಳೆದ 10 ವರ್ಷದ ಅವಧಿಯಲ್ಲಿ ಮಾಜಿ ಸಚಿವ ಡಿ.ಸುಧಾಕರ್ ಕೈಗೊಂಡ ಅಭಿವೃದ್ಧಿ ಕೆಲಸ ನೆಚ್ಚಿಕೊಂಡು ಕಾಂಗ್ರೆಸ್ ಪ್ರಚಾರ ಕೈಗೊಂಡಿದೆ. ಈ ಬಾರಿ ಮೈತ್ರಿ ಬಲ ಇದೆ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಉಂಟಾದ ಸೋಲು, ಸ್ವ-ಪಕ್ಷೀಯರು, ಪಕ್ಷೇತರರು ಸುಧಾಕರ್ ವಿರುದ್ಧ ಸಿಡಿದೆದ್ದು ನಗರಸಭೆಯಲ್ಲಿ ಅಧಿಕಾರ ಕೈ ತಪ್ಪಿಸಿದ ಕಹಿಯನ್ನು ಮರೆತಿಲ್ಲ. ಅಸ್ತಿತ್ವ ಮರಳಿ ಪಡೆಯಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ.

ಗೆಲುವೇ ಸ್ಫೂರ್ತಿ: ನಗರಸಭೆ ಇತಿಹಾಸದಲ್ಲಿ ಬಿಜೆಪಿಯ ಲತಾ ಘಾಗರ ವಾಳೆ ಮೊದಲ ಬಾರಿಗೆ ಸದಸ್ಯೆಯಾಗಿ ಆಯ್ಕೆಯಾಗಿದ್ದು, ನಂತರ ನಡೆದ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಿತ್ತು. ವಿಧಾನಸಭೆ ಚುನಾವಣೆಯಲ್ಲಿ ಸಿಕ್ಕ ಗೆಲುವು ಅಭ್ಯರ್ಥಿಗಳ ಸ್ಫೂರ್ತಿಗೆ ಕಾರಣವಾಗಿದೆ.

Leave a Reply

Your email address will not be published. Required fields are marked *