ಸಮಾಜಮುಖಿ ಕಾರ್ಯಕ್ಕೆ ಆದ್ಯತೆ

ಹಿರಿಯೂರು: ಕ್ಷೇತ್ರದ ಸಮಗ್ರ ಅಭಿವೃದ್ಧಿ ಜತೆಗೆ ಜನರ ಸೇವೆ ಹಾಗೂ ಸಮಾಜಮುಖಿ ಕಾರ್ಯಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

ನಗರದ ನೆಹರು ಮೈದಾನದಲ್ಲಿ ನಿರ್ಮಿಸಿರುವ ದಿವಂಗತ ಎ.ಕೃಷ್ಣಪ್ಪ ರೋಟರಿ ಸಭಾಂಗಣವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ನಮ್ಮ ತಂದೆಯವರು ಹಿರಿಯೂರನ್ನು ಮಾದರಿ ತಾಲೂಕನ್ನಾಗಿಸುವ ಕನಸು ಕಂಡಿದ್ದರು. ಅದರ ಸಾಕಾರಕ್ಕಾಗಿ ಶಕ್ತಿಮೀರಿ ಶ್ರಮಿಸುತ್ತೇನೆ ಎಂದರು.

ತಾಲೂಕಿನಲ್ಲಿ ಭೀಕರ ಬರ, ಮಳೆ ಕೊರತೆಯಿಂದ ಜನ-ಜಾನುವಾರು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಬಗೆಹರಿಸಲು ಹಾಗೂ ಸಮರ್ಥವಾಗಿ ಬರ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಶಾಶ್ವತ ನೀರಾವರಿ ಸೌಲಭ್ಯ, ಶಿಕ್ಷಣ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.

ಹೈಟೆಕ್ ಆಸ್ಪತ್ರೆ: ತಾಲೂಕಿನ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಹಿಂದುಳಿದ ಚಿತ್ರದುರ್ಗ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗಿದೆ ಎಂದರು.

ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಿ.ಟಿ.ಶ್ರೀನಿವಾಸ್, ರೋಟರಿ ಅಧ್ಯಕ್ಷ ಎಂ.ಎಸ್.ರಾಘವೇಂದ್ರ, ವೆಂಕಟೇಶ್, ವಿಶ್ವನಾಥ್, ಹರ್ಷ, ರಾಘವೇಂದ್ರ, ಗೋಪಿನಾಥ್, ಡಾ.ಶ್ರೀಪತಿ, ಗೋಪಿನಾಥ್, ದ್ಯಾಮಣ್ಣ, ಹಾಲಪ್ಪ, ನಗರಸಭೆ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್, ಕೇಶವಮೂರ್ತಿ ಇತರರಿದ್ದರು. ರೋಟರಿ ವಾಣಿ ವಿಶೇಷ ಸಂಚಿಕೆಯನ್ನು ಸಂಸದ ಎ.ನಾರಾಯಣಸ್ವಾಮಿ ಬಿಡುಗಡೆ ಮಾಡಿದರು.

Leave a Reply

Your email address will not be published. Required fields are marked *