ಅಧ್ಯಾತ್ಮ ಚಿಂತನೆ ನೆಮ್ಮದಿ ಜೀವನದ ರಹದಾರಿ

ಹಿರಿಯೂರು: ಧ್ಯಾನ, ಅಧ್ಯಾತ್ಮ ಚಿಂತನೆ ಮೂಲಕ ಜ್ಞಾನದ ಉನ್ನತಿ, ಜೀವನದಲ್ಲಿ ನೆಮ್ಮದಿ, ಯಶಸ್ಸು ದೊರೆಯುತ್ತದೆ ಎಂದು ಬ್ರಹ್ಮಕುಮಾರಿ ಬಿ.ಕೆ. ಗಾಯತ್ರಿ ತಿಳಿಸಿದರು.

ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ವೃದ್ಧಾಪ್ಯದಲ್ಲಿ ಆರೋಗ್ಯ ನಿರ್ವಹಣೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯೋಗ ಮತ್ತು ಧ್ಯಾನದಿಂದ ಕೋಪ, ಅಸೂಯೆ, ದ್ವೇಷ, ಮಾನಸಿಕ ಒತ್ತಡ ಶಮನವಾಗಿ ಸದ್ಗುಣ ಜಾಗೃತಗೊಳ್ಳುತ್ತದೆ. ದುಶ್ಚಟಗಳಿಂದ ದೂರವಾಗಿ ಕಾಯಿಲೆ ಮುಕ್ತರಾಗಲು ಸಾಧ್ಯ. ಅಧ್ಯಾತ್ಮ ಪ್ರತಿ ಮನುಷ್ಯನಿಗೂ ಅಗತ್ಯ ಎಂದರು.

ನಗರಸಭೆ ಸದಸ್ಯ ಜಿ. ಪ್ರೇಮ್‌ಕುಮಾರ್ ಮಾತನಾಡಿ, ದೇಶೀಯ ಜನಮಾನಸದಲ್ಲಿ ಅಧ್ಯಾತ್ಮ ದೃಢವಾಗಿ ನೆಲೆ ನಿಂತಿದೆ. ಪೂರ್ವಜರು ಧ್ಯಾನ, ಅಧ್ಯಾತ್ಮ, ಧಾರ್ಮಿಕ ಸಂಪ್ರದಾಯಗಳನ್ನು ಪೀಳಿಗೆಗೆ ರವಾನಿಸಿದ್ದಾರೆ ಎಂದು ತಿಳಿಸಿದರು.

ಮನೆಯ ಪರಿಸರ, ಭೋಜನದ ಮಹತ್ವ, ವ್ಯಾಯಾಮ, ರಾಜಯೋಗದ ಲಾಭ ಕುರಿತು ಗೋಷ್ಠಿ ನಡೆದವು. ಅಧ್ಯಾತ್ಮಿಕ ಚಿಂತನೆಯಿಂದ ಆನಂದಮಯ ಜೀವನ ಕುರಿತು ರಾಜಸ್ಥಾನದ ಡಾ. ಮಹೇಶ್ ಹೇಮಾದ್ರಿ ಉಪನ್ಯಾಸ ನೀಡಿದರು. ಡಾ. ಹನುಮಂತ ಭಾರಶೆಟ್ಟಿ, ಹಿರಿಯ ನಾಗರಿಕರಿಗೆ ವಿಶೇಷ ವ್ಯಾಯಾಮ ತರಬೇತಿ ನೀಡಿದರು.