ವರುಣನ ಕೃಪೆಗಾಗಿ ನಮಾಜ್

ಹಿರಿಯೂರು: ಪಟ್ಟಣದ ಜಾಮಿಯಾ ಮಸೀದಿ ಆವರಣದಲ್ಲಿ ಮುಸ್ಲಿಮರು, ವರುಣನ ಕೃಪೆಗಾಗಿ ಭಾನುವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬಿರು ಬಿಸಿಲಲ್ಲಿ ಮಧ್ಯಾಹ್ನ 2.30ಕ್ಕೆ ಪ್ರಾರಂಭಿಸಿದ ಪ್ರಾರ್ಥನೆ ಒಂದೂವರೆ ಗಂಟೆ ಕಾಲ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಮರು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಮುಸ್ಲಿಂ ಗುರುಗಳು-ಮುಖಂಡರು, ಜಿಲ್ಲೆಯಲ್ಲಿ ಮಳೆ ಇಲ್ಲದೇ ಜನ, ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದು, ಹನಿ ನೀರಿಗೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಈ ಕಾರಣಕ್ಕೆ ದೇವರಲ್ಲಿ ಪ್ರಾರ್ಥಿಸಿದರೆ ಮಳೆ ಬರುತ್ತದೆ ಎಂಬುದು ನಮ್ಮಗಳ ನಂಬಿಕೆ. ನಮ್ಮ ಕೂಗು ದೇವರಿಗೆ ಕೇಳಿಸಿ ಮಳೆ ಬರಲಿದೆ ಎಂಬ ನಂಬಿಕೆ ಇದೆ ಎಂದರು.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ, ಕೃಷಿಕರು, ಜಾನುವಾರು, ಜನತೆ ನೆಮ್ಮದಿಯಿಂದ ಜೀವಿಸಬೇಕು. ವಿ.ವಿ.ಸಾಗರ ಜಲಾಶಯ ತುಂಬಿ ಕೃಷಿ ಚಟುವಟಿಕೆ ಚುರುಕುಗೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಜನತೆ ಕೂಡ ನೀರನ್ನು ಮಿತ ಬಳಕೆ ಮಾಡುವತ್ತ ಗಮನ ಹರಿಸಬೇಕು. ಕೆರೆ, ಕಟ್ಟೆಗಳ ಉಳಿವು, ಮರ ಗಿಡಗಳನ್ನು ಬೆಳೆಸುವತ್ತ ಸರ್ಕಾರದ ಜತೆ ನಾವುಗಳು ಕೈಜೋಡಿಸಬೇಕಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಭೀಕರ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಾಮಿಯಾ ಮಸೀದಿ ಗುರುಗಳಾದ ಸಿಗ್ಬತ್ ಉಲ್ಲಾ , ಮೌಲಾನ ವಸೀರೆಹಮಾನ್ ಸಾಬ್, ಮೌಲಾನ ಇಲಿಯಾಸ್, ಮೌಲಾನ ವಸೀಖ್ ಉಲ್ಲಾ, ಮೌಲಾನ ರಬ್ಬಾನಿ, ಜಾಮಿಯಾ ಮಸೀದಿ ಅಧ್ಯಕ್ಷರಾದ ಬಿ.ಎಸ್.ನವಾಬ್‌ಸಾಬ್ ಹಾಗೂ ಹಿರಿಯೂರು ಪಟ್ಟಣ ಸೇರಿ ಸುತ್ತಮುತ್ತಲಿನ ಹಳ್ಳಿಗಳ ಮುಸ್ಲಿಮರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *