ಜನರ ಸಮಸ್ಯೆಗೆ ಸ್ಪಂದಿಸದಿದ್ದರೆ ದಂಡಂ ದಶಗುಣಂ ಅಸ್ತ್ರ

ಹಿರಿಯೂರು: ಸರ್ಕಾರಿ ಇಲಾಖೆಗೆ ಬರುವ ಸಾರ್ವಜನಿಕರ ಜತೆ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಶಾಸಕಿ ಪೂರ್ಣಿಮಾ ಹೇಳಿದರು.

ಪ್ರವಾಸಿ ಮಂದಿರ ಸಭಾಂಗಣದಲ್ಲಿ ಸೋಮವಾರ ನಡೆದ ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಶಕದಿಂದ ತಾಲೂಕಿನಲ್ಲಿ ಭೀಕರ ಬರ, ಅಂತರ್ಜಲ ಕುಸಿತ, ಮೇವಿನ ಕೊರತೆ, ಕುಡಿವ ನೀರಿಗೆ ಹಾಹಾಕಾರ ಇದೆ. ಜನ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದ್ದು ಬರ ನಿರ್ವಹಿಸುವ ಜತೆಗೆ ಸರ್ಕಾರಿ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಬೇಕು ಎಂದರು.

ದರ್ಪ ತೋರುವ ಅಧಿಕಾರಿಗಳ ವರ್ಗ: ಜನರ ಜತೆ ಸೌಜನ್ಯದಿಂದ ವರ್ತಿಸದೆ ದರ್ಪ ತೋರುವ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ ಶಾಸಕರು ಅಂತಹವರು ವರ್ಗ ಮಾಡಿಸಿಕೊಂಡು ಬೇರೆಡೆ ಹೋಗಬಹುದು ಎಂದರು.

ಕಂದಾಯ ಇಲಾಖೆ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ದೂರು ಕೇಳಿ ಬಂದಿದೆ. ಸರ್ಕಾರಿ ಕಚೇರಿಗೆ ಬರುವ ಜನರನ್ನು ಜಾತಿ, ಪಕ್ಷ ಕೇಳದೆ ಕೆಲಸ ಮಾಡಿಕೊಡುವುದು ಅಧಿಕಾರಿಗಳ ಕರ್ತವ್ಯ. ಆದರೆ ಕೆಲವರು ವಿರೋಧ ಪಕ್ಷದವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಅಂತಹವರು ಕ್ಷೇತ್ರದಲ್ಲಿ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬೇರೆಡೆ ಹೋಗಬಹುದು ಎಂದರು.

ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಮಾತನಾಡಿ, ಅರ್ಹರಿಗೆ ಸರ್ಕಾರದ ಸೌಲಭ್ಯ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ. ಸಮಸ್ಯೆ ಹೊತ್ತು ಬರುವ ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಸಕಾಲಕ್ಕೆ ಸಮಸ್ಯೆ ಪರಿಹರಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೃಷಿ ಇಲಾಖೆ ಅಧಿಕಾರಿಗಳಾದ ಡಾ.ಅಸ್ಲಂ, ಉಷಾದೇವಿ, ತೋಟಗಾರಿಕೆ ಸಹಾಯಕ ನಿರ್ದೇಶಕ ತೋಟಯ್ಯ, ಜಯಂತ್, ತಾಪಂ ಇಒ ರಾಮ್‌ಕುಮಾರ್, ಗ್ರೇಡ್ 2 ತಹಸೀಲ್ದಾರ್ ಚಂದ್ರಕುಮಾರ್ ಇದ್ದರು.

ಸರ್ಕಾರಕ್ಕೆ ವರದಿ ಸಲ್ಲಿಕೆ: ಈಚೆಗೆ ತಾಲೂಕಿನ ಕೋಡಿಹಳ್ಳಿ, ಹೂವಿನಹೊಳೆ, ಕೂಡಲಹಳ್ಳಿ, ವಿ.ಕೆ. ಗುಡ್ಡ ಇತರೆಡೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ 312 ಹೆಕ್ಟೇರ್ ಪ್ರದೇಶದಲ್ಲಿನ ತೆಂಗು, ಅಡಕೆ, ಬಾಳೆ, ಪಪ್ಪಾಯ ಇತರ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿ ಅಂದಾಜು 68 ಲಕ್ಷ ರೂ. ನಷ್ಟವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ತೋಟಯ್ಯ ಸಭೆಯ ಗಮನಕ್ಕೆ ತಂದರು.

Leave a Reply

Your email address will not be published. Required fields are marked *