ನದಿ ನೀರಲ್ಲಿ ಸಾಗುವ ಚಿಣ್ಣರು

ಹಿರಿಯೂರು: ವೇದಾವತಿ ನದಿಗೆ ಸೇತುವೆ ನಿರ್ಮಿಸಬೇಕು ಎಂಬ ಸಂಗೇನಹಳ್ಳಿ ಹಾಗೂ ಸುತ್ತಲಿನ ಗ್ರಾಮಸ್ಥರ ದಶಕಗಳ ಬೇಡಿಕೆ ಕನಸಾಗಿ ಉಳಿದಿದೆ.

ವೇದಾವತಿ, ಸುವರ್ಣಮುಖಿ ನದಿಗಳು ತಾಲೂಕಿನ ಜೀವನಾಡಿಯಾಗಿದ್ದು, ಮಳೆಗಾಲದಲ್ಲಿ ತುಂಬಿ ಹರಿಯುತ್ತವೆ. ಆ ಸಂದರ್ಭದಲ್ಲಿ ನದಿ ದಾಟಲು ಸೇತುವೆ ಇಲ್ಲದೆ, ಸಂಗೇನಹಳ್ಳಿ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಹರಸಾಹಸ ಮಾಡಬೇಕಾಗುತ್ತದೆ.

ಸಂಗೇನಹಳ್ಳಿ ಗ್ರಾಮಕ್ಕೆ ಸಾರಿಗೆ ಸಂಪರ್ಕವಿಲ್ಲ. ಪರಿಣಾಮ ನದಿ ತುಂಬಿದಾಗ, 5-6 ಕಿ.ಮೀ. ಸುತ್ತಿಬಳಸಿ ಶಿಡ್ಲಯ್ಯನಕೋಟೆ, ರಂಗೇನಹಳ್ಳಿ, ಚಳ್ಳಕೆರೆಗೆ ತೆರಳಬೇಕಿದೆ. ನೀರಿನ ಹರಿವು ಕಡಿಮೆಯಾದಾಗ ಕೈಯಲ್ಲಿ ಜೀವ ಹಿಡಿದು ನದಿ ದಾಟುವ ಪರಿಸ್ಥಿತಿ ಇದೆ. ಸಂಬಂಧಿಸಿದ ಇಲಾಖೆ, ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

2015ರಲ್ಲಿ ಉತ್ತಮ ಮಳೆಯಾಗಿ ವೇದಾವತಿ ನದಿ ತುಂಬಿ ಹರಿದಿತ್ತು. ಈ ವೇಳೆ ಸ್ಥಳೀಯರ ಒತ್ತಾಯಕ್ಕೆ ಮಣಿದ ಅಂದಿನ ಶಾಸಕ ಡಿ.ಸುಧಾಕರ್ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಂದ ಸರ್ವೆ ಮಾಡಿಸಿ, ಸರ್ಕಾರಕ್ಕೆ ವರದಿ ನೀಡಲು ಸೂಚಿಸಿದ್ದರು.

ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ನಾಲ್ಕೈದು ಕೋಟಿ ರೂ. ವೆಚ್ಚವಾಗುತ್ತದೆ ಎಂಬ ವರದಿ ನೀಡಿದ್ದರೇ ಹೊರತು ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ.

ನದಿ ಪಾತ್ರದಲ್ಲಿ ನಿರಂತರ ಮರಳು ಗಣಿಗಾರಿಕೆಯಿಂದ ಗುಂಡಿಗಳಾಗಿವೆ. ಅವು ಮಳೆಗಾಲದಲ್ಲಿ ಭರ್ತಿಯಾಗಿ ನದಿ ದಾಟುವವರಿಗೆ ಅಪಾಯ ತಂದೊಡ್ಡಿವೆ. ಗ್ರಾಮದಿಂದ 25-30 ವಿದ್ಯಾರ್ಥಿಗಳು ಶಿಡ್ಲಯ್ಯನಕೋಟೆ, ರಂಗೇನಹಳ್ಳಿ, ಕಲಮರಹಳ್ಳಿ ಗ್ರಾಮದ ಶಾಲೆಗೆ ಸಾಗುವ ಮಾರ್ಗದಲ್ಲಿ ನದಿ ದಾಟಬೇಕಾದುದು ಅನಿವಾರ್ಯ.

ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿದೆ. ಸ್ಥಳ, ವಿನ್ಯಾಸ, ಯೋಜನಾ ವರದಿ ತಯಾರಿಸಲು ತಿಂಗಳ ಕಾಲಾವಕಾಶ ನೀಡಲಾಗಿದೆ. ಇದು ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ್ದು ಎನ್ನುತ್ತಾರೆ ಲೋಕೋಪಯೋಗಿ ಅಧಿಕಾರಿಗಳು.

ಬರ, ಮರಳು ಗಣಿಗಾರಿಕೆಯಿಂದ ಅಂತರ್ಜಲ ಕುಸಿದಿದೆ. ವೇದಾವತಿಗೆ ತೂಗು ಸೇತುವೆ, ಬ್ಯಾರೇಜ್ ನಿರ್ಮಿಸಿದರೆ ರೈತರಿಗೆ ಅನುಕೂಲವಾಗಲಿದೆ. ಸಂಬಂಧಿಸಿದ ಇಲಾಖೆ, ಶಾಸಕರ ಗಮನಕ್ಕೆ ತಂದರೂ ಸ್ಪಂದನೆ ದೊರೆಯುತ್ತಿಲ್ಲ ಎಂಬುದು ಜನರ ಅಳಲು.

ಸಿಎಂ ಕುಮಾರಸ್ವಾಮಿ ಅವರು ಶಾಲಾ ಸಂಪರ್ಕ ಸೇತುವೆ ಯೋಜನೆ ಜಾರಿಗೆ ತಂದಿದ್ದಾರೆ. ಆದರೂ, ಅಧಿಕಾರಿಗಳ ನಿರ್ಲಕ್ಷೃದಿಂದ ಕಾಮಗಾರಿಗೆ ಅನುಮೋದನೆ ದೊರೆತಿಲ್ಲ. ಕೂಡಲೇ ಸೇತುವೆ ಕಾಮಗಾರಿಗೆ ಚಾಲನೆ ನೀಡಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ಸಂಗೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಶಾಲಾ ಸಂಪರ್ಕ ಸೇತುವೆ ನಿರ್ಮಾಣಕ್ಕೆ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಭರವಸೆ ನೀಡಿದ್ದಾರೆ.

ನದಿಗೆ ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆಗಾಗಿ ಕಾಯುತ್ತಿದ್ದೇವೆ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆ ಎಇಇ ಭೀಮರಾಜ್.

Leave a Reply

Your email address will not be published. Required fields are marked *