More

  ಬಾಗುತ್ತ, ಬಳಕುತ್ತ ವೇದಾವತಿಯತ್ತ ಹೆಜ್ಜೆ ಹಾಕಿದ ಭದ್ರೆ

  ಹಿರಿಯೂರು: ಗುರುವಾರ ಚಳ್ಳಕೆರೆ ಜನರ ಕನಸು ನನಾಸದ ದಿನ! ಎಷ್ಟೋ ವರ್ಷಗಳ ಬಳಿಕ ವೇದಾವತಿ ಒಡಲಿಗೆ ನೀರು ಧುಮ್ಮಿಕ್ಕಿದ ದಿನ.

  ವಿವಿ ಸಾಗರದ ಗೇಟ್ ಮೇಲೆತ್ತಿದ್ದೇ ತಡ. ಜಲಾಶಯದೊಳಗಿದ್ದ ಭದ್ರೆ ಬಾಗುತ್ತ, ಬಳುಕತ್ತ ವೇದಾವತಿಯತ್ತ ಹೆಜ್ಜೆ ಹಾಕಿದಳು.

  ಇಂಥದ್ದೊಂದು ಜಲವೈಭವ ಕಣ್ತುಂಬಿಕೊಂಡ ಜನಪ್ರತಿನಿಧಿಗಳು, ಸಾರ್ವಜನಿಕರು ಧನ್ಯತೆಯ ಭಾವದಲ್ಲಿ ಮಿಂದರು.

  ಈ ಕ್ಷಣಕ್ಕಾಗಿ ಕಾದಿದ್ದ ರೈತರ ಎದೆಯಲ್ಲಿ ಕೃಷಿ ಚಟುವಟಿಕೆಗಳ ಹೊಸ ಕನಸು ಚಿಗೊರೆಡೆದವು. ಜಲಚರಗಳಿಗೆ, ಜೀವ ವೈವಿಧ್ಯಗಳಿಗೆ ಹೊಸ ಜೀವ ಸಿಕ್ಕಂತಾಗಿತ್ತು.

  ವಿವಿ ಸಾಗರ ಜಲಾಶಯದಿಂದ ವೇದವಾತಿ ನದಿಗೆ 0.25 ಟಿಎಂಸಿ ಅಡಿ ನೀರು ಹರಿಸುವ ಕಾರ್ಯಕ್ಕೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಗುರುವಾರ ಚಾಲನೆ ನೀಡಿದಾಗ ಕಂಡು ಬಂದ ಸಂಭ್ರಮವಿದು.

  ಸಚಿವರು ಮಾತನಾಡಿ, ಮಧ್ಯ ಕರ್ನಾಟಕದ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆದ್ಯತೆ ನೀಡಲು ಹಾಗೂ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಿದೆ ಎಂದರು.

  ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರವೇ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಗೆ ವೇಗ ನೀಡಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

  ವಿವಿ ಸಾಗರಕ್ಕೆ ಎತ್ತಿನಹೊಳೆ ನೀರು: ಬಯಲುಸೀಮೆಯ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ಕುಡಿವ ನೀರು ಒದಗಿಸುವ ಎತ್ತಿನ ಹೊಳೆ ಯೋಜನೆ ಮುಕ್ತಾಯದ ಹಂತ ತಲುಪಿದೆ. ಎತ್ತಿನಹೊಳೆಯಿಂದ ಲಭ್ಯವಾಗುವ 5-6 ಟಿಎಂಸಿ ಅಡಿ ನೀರನ್ನು ಪ್ರಾಯೋಗಿಕವಾಗಿ ವಿವಿ ಸಾಗರಕ್ಕೆ ಹರಿಸಲಾಗುವುದು ಎಂದರು.

  ಅನ್ಯಾಯ ಸರಿಪಡಿಸಲು ಯತ್ನ: ಭದ್ರಾ ಮೇಲ್ದಂಡೆ ಯೋಜನೆಯಡಿ ವಿವಿ ಸಾಗರಕ್ಕೆ 5ಟಿಎಂಸಿ ಅಡಿ ನೀರು ನಿಗದಿಯಾಗಿತ್ತು. ಕಾಂಗ್ರೆಸ್ ಅವಧಿಯಲ್ಲಿ 3 ಟಿಎಂಸಿ ಅಡಿಗೆ ಕಡಿತವಾಗಿತ್ತು. ಈ ಬಗ್ಗೆ ಶೀಘ್ರದಲ್ಲಿ ಅಧಿಕಾರಿಗಳ ಸಭೆ ಕರೆದು ವಿವಿ ಸಾಗರಕ್ಕೆ 5 ಟಿಎಂಸಿ ಅಡಿ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

  ವಿವಿ ಸಾಗರ ಜಲಾಶಯದಿಂದ ವೇದಾವತಿ ನದಿ ಮೂಲಕ ಚಳ್ಳಕೆರೆ ತಾಲೂಕಿಗೆ 0.25 ಟಿಎಂಸಿ ನೀರು ಹರಿಸಲು ನೀರಾವರಿ ಇಲಾಖೆ ಆದೇಶದಲ್ಲಿ ತಿಳಿಸಿದೆ. ಆದರೆ, ಚಳ್ಳಕೆರೆ ಶಾಸಕ ರಘುಮೂರ್ತಿ ಅವರು ಚಳ್ಳಕೆರೆ ಗಡಿ ಭಾಗದಿಂದ ನೀರಿನ ಪ್ರಮಾಣ ಲೆಕ್ಕ ಹಾಕಲಾಗುವುದು ಎಂದು ಹೇಳಿದ್ದಾರೆ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ರೈತರು ಮನವಿ ಮಾಡಿದಾಗ ಸಚಿವರು ಪ್ರತಿಕ್ರಿಯೆಗೆ ನಿರಾಕರಿಸಿದರು.

  ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ವಿವಿ ಸಾಗರ ಜಲಾಶಯದಿಂದ ವೇದಾವತಿ ನದಿಗೆ ನೀರು ಹರಿಸುವುದರಿಂದ ಎರಡು ತಾಲೂಕಿನ ಜನ-ಜಾನುವಾರುಗಳ ಕುಡಿವ ನೀರಿನ ಭವಣೆ ದೂರಾಗಿ, ವೇದಾವತಿ ನದಿ ಪಾತ್ರ ಹಸಿರಾಗಿ, ಕೃಷಿ ಚಟುವಟಿಕೆಗಳಿಗೆ ವರದಾನವಾಗಲಿದೆ ಎಂದರು.

  ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಅಜ್ಜಂಪುರ ರೈಲ್ವೆ ಕ್ರಾಸಿಂಗ್ ಕಾಮಗಾರಿ ವಿಳಂಬವಾದರೆ, ಭದ್ರಾ ಮೇಲ್ದಂಡೆ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳ್ಳುವುದಿಲ್ಲ, ಈ ಬಗ್ಗೆ ಅಧಿಕಾರಿಗಳ ಸಭೆ ಕರೆಯುವಂತೆ ಒತ್ತಾಯಿಸಿದರು.

  ಹಿರಿಯೂರು ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ರೈತ ಮುಖಂಡರಾದ ಕೆ.ಸಿ.ಹೊರಕೇರಪ್ಪ, ಕೆ.ಟಿ.ತಿಪ್ಪೇಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ರವಿಕುಮಾರ್ ಇತರರಿದ್ದರು.

  ಶಾಸಕಿ ಪೂರ್ಣಿಮಾ ಗೈರು: ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts