More

    ಕಳಪೆ ಬಿತ್ತನೆ ತೊಗರಿ ವಿತರಣೆ ಆರೋಪ

    ಹಿರಿಯೂರು: ಕೃಷಿ ಇಲಾಖೆ ಮುಂಗಾರು ಹಂಗಾಮಿನಲ್ಲಿ ವಿತರಿಸಿದ್ದ ಬಿತ್ತನೆ ತೊಗರಿ ಕಳಪೆಯಾಗಿದೆ ಎಂದು ಆರೋಪಿಸಿ ಶನಿವಾರ ಕೃಷಿ ಇಲಾಖೆ ಬಳಿ ನೂರಾರು ರೈತರು ಕಾಳು ಕಟ್ಟದ ತೊಗರಿ ಗಿಡ ಹಿಡಿದು ಪ್ರತಿಭಟನೆ ನಡೆಸಿದರು.

    ಬಿತ್ತನೆ ಮಾಡಿ ನಾಲ್ಕೈದು ತಿಂಗಳಾದರೂ ಕಾಳು ಕಟ್ಟಿಲ್ಲ. ಕೃಷಿ ಇಲಾಖೆ ಮೂಲಕ ರೈತರಿಗೆ ವಿತರಿಸುತ್ತಿರುವ ಯಂತ್ರೋಪಕರಣಗಳು, ಬಿತ್ತನೆ ಬೀಜ ಕಳಪೆಯಾಗಿವೆ. ಸ್ವಂತ ಬೀಜ ಬಿತ್ತನೆ ಮಾಡಿರುವ ರೈತರ ಬೆಳೆ ಸಮೃದ್ಧವಾಗಿದೆ. ಇಲಾಖೆ ಮೂಲಕ ಖರೀದಿಸಿ ಬೀಜ ಬಿತ್ತನೆ ಮಾಡಿರುವ ಹೊಲಗಳಲ್ಲಿ ಗಿಡಗಳು ಮಾತ್ರ ಹುಲುಸಾಗಿ ಬೆಳೆದಿದ್ದು, ಕಾಯಿ ಕಟ್ಟಿಲ್ಲ ಎಂದು ಅಳಲು ತೋಡಿಕೊಂಡರು.

    ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು. ವಂಚಿಸಿರುವ ಖಾಸಗಿ ಕಂಪನಿಗಳಿಗೆ ದಂಡ ವಿಧಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

    ಇಲಾಖೆ ಮಾಹಿತಿ ಫಲಕದಲ್ಲಿ ರೈತರಿಗೆ ಸಿಗುವ ಸೌಲಭ್ಯಗಳ ವಿವರ ನೀಡುವಂತೆ ಸೂಚಿಸಿ ವರ್ಷವಾದರೂ ನಿಯಮ ಪಾಲಿಸಿಲ್ಲ. ಕೃಷಿ ಅಧಿಕಾರಿಗಳು, ವಿಜ್ಞಾನಿಗಳು ರೈತರ ಜಮೀನುಗಳಿಗೆ ಭೇಟಿ ನೀಡುತ್ತಿಲ್ಲ. ಕೃಷಿ ಇಲಾಖೆ ಖಾಸಗಿ ಕಂಪನಿಗಳ ಉತ್ಪನ್ನ ಮಾರುವ ಕೇಂದ್ರವಾಗಿದೆ ಎಂದು ರೈತರು ದೂರಿದರು.

    ಎರೆ ನಾಡು ರೈತ ಸಂಘದ ಅಧ್ಯಕ್ಷ ಕೆ.ಟಿ.ರುದ್ರಮುನಿ, ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಮುಖಂಡರಾದ ಕೆ.ಸಿ.ಹೊರಕೇರಪ್ಪ, ಸಿದ್ದರಾಮಣ್ಣ, ಶಿವಕುಮಾರ್, ಅರಳೀಕೆರೆ ತಿಪ್ಪೇಸ್ವಾಮಿ, ಲಕ್ಷ್ಮೀಕಾಂತ್, ಕೃಷ್ಣಾನಾಯ್ಕಾ, ಸಿದ್ದಪ್ಪ, ವಿರೂಪಾಕ್ಷಪ್ಪ, ಕಾಂತರಾಜ್, ಗಿರೀಶ್, ನಾಗರಾಜ್ ಇತರರಿದ್ದರು.

    ಮಳೆ ಕೊರತೆ ಬಿತ್ತನೆ ಕುಂಟಿತ: ತಾಲೂಕಿನಲ್ಲಿ ಮುಂಗಾರು ಹಂಗಾಮಿಗೆ 10 ಸಾವಿರ ಹೆಕ್ಟೇರ್ ತೊಗರಿ ಬಿತ್ತನೆ ಗುರಿ ಇತ್ತು. ಮಳೆಯ ಕೊರತೆಯಿಂದ ಕೇವಲ 1624 ಹೆಕ್ಟೇರ್ ಬಿತ್ತನೆ ಆಗಿದೆ. ರೈತರ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಕೃಷಿ ಅಧಿಕಾರಿ ಉಷಾರಾಣಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts