ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಜೀವನಾಡಿ ವಿವಿ ಸಾಗರ ಜಲಾಶಯಕ್ಕೆ 5 ಟಿಎಂಸಿ ಅಡಿ ಭದ್ರಾ ನೀರು ತುಂಬಿಸುವುದು ಮತ್ತು ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ನಗರದ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನಲ್ಲಿ ಕಳೆದ ಒಂದು ವರ್ಷದಲ್ಲಿ 336 ಕೊಳವೆಬಾವಿ ಕೊರೆಸಲಾಗಿದೆ ಎಂದು ಎಇಇ ಮಂಜುನಾಥ್ ಹೇಳುತ್ತಿದ್ದಂತೆ ಮಧ್ಯ ಪ್ರವೇಶಿಸಿ ಶಾಸಕರು, ತಾಲೂಕಿನಲ್ಲಿ ನೀರಿಗೆ ಹಾಹಾಕಾರ ಇದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ವಿವಿ ಸಾಗರ ಮತ್ತು ಗಾಯತ್ರಿ ಜಲಾಶಯದಿಂದ ನೇರ ಪೈಪ್‌ಲೈನ್ ಮೂಲಕ ಜೆ.ಜಿ.ಹಳ್ಳಿ ಮತ್ತು ಐಮಂಗಲ ಹೋಬಳಿಗೆ ಶಾಶ್ವತ ಕುಡಿವ ನೀರು ಒದಗಿಸುವ ಬಹುಗ್ರಾಮ ಕುಡಿವ ನೀರು ಯೋಜನೆ ಕಾಮಗಾರಿ ಕಳಪೆಯಾಗಿದ್ದು, ಟ್ಯಾಂಕ್‌ಗಳು ಬೀಳುವ ಸ್ಥಿತಿಯಲ್ಲಿವೆ ಎಂದು ಜಿಪಂ ಸದಸ್ಯರಾದ ಪಾಪಣ್ಣ, ನಾಗೇಂದ್ರನಾಯ್ಕ, ಗೀತಾ, ಶಶಿಕಲಾ ದೂರಿದರು.
ಪ್ರತಿಕ್ರಿಯಿಸಿದ ಎಇಇ ಮಂಜುನಾಥ್, ಕಾಮಗಾರಿ ಗುಣಮಟ್ಟದಿಂದ ಕೂಡಿದ್ದು, ಜನವರಿ ಅಂತ್ಯಕ್ಕೆ ನೀರು ಪೂರೈಕೆ ಮಾಡಲಾಗುವುದು ಎಂದರು.
ತಾಲೂಕಿನಲ್ಲಿ ಸಾವಿರಾರು ಎಕರೆ ತೋಟಗಾರಿಕೆ ಬೆಳೆ ನಾಶವಾಗಿದ್ದು, ಬೆಳೆ ನಷ್ಟದ ಮಾಹಿತಿ ಕೇಳಿದರೆ ನಮಗೆ ಡ್ರೋಣ್ ಕೊಡಿ ಸರ್ವೆ ನಡೆಸುತ್ತೇವೆ ಎಂದು ತೋಟಗಾರಿಕೆ ಅಧಿಕಾರಿ ಹಾರಿಕೆ ಉತ್ತರ ನೀಡುತ್ತಾರೆ ಎಂದು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ ಸಭೆಯ ಗಮನಕ್ಕೆ ತಂದರು. ರೈತ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗೆ ಪೂರ್ಣಿಮಾ ತಾಕೀತು ಮಾಡಿದರು.
ತಾಲೂಕಿನಲ್ಲಿ 453 ಅಂಗನವಾಡಿಗಳಿದ್ದು, 350ಕ್ಕೂ ಹೆಚ್ಚು ಕಟ್ಟಡಗಳು ಅಪಾಯದ ಸ್ಥಿತಿಯಲ್ಲಿವೆ. ಇವುಗಳ ದುರಸ್ತಿ-ಅಗತ್ಯ ಸೌಲಭ್ಯ ಕಲ್ಪಿಸಲು ಅನುದಾನ ನೀಡಲಾಗುವುದು ಎಂದ ಶಾಸಕರು, ಸಭೆಗೆ ಗೈರಾದ ನಿರ್ಮಿತಿ ಕೇಂದ್ರ ಅಧಿಕಾರಿಗೆ ನೋಟಿಸ್ ನೀಡುವಂತೆ ಸೂಚಿಸಿದರು.
ತಾಪಂ ಉಪಾಧ್ಯಕ್ಷೆ ಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತರಾಯಪ್ಪ, ಜಿಪಂ ಸದಸ್ಯೆ ರಾಜೇಶ್ವರಿ, ಸಿಪಿಐ ಚನ್ನೇಗೌಡ, ಇಒ ಹನುಮಂತಪ್ಪ, ಎಇಇ ಶ್ರೀರಂಗಪ್ಪ, ತೋಟಯ್ಯ, ನಗರಸಭೆ ಆಯುಕ್ತ ಶಿವಪ್ರಸಾದ್, ತಹಸೀಲ್ದಾರ್ ಸತ್ಯನಾರಾಯಣ, ನಾಗರಾಜಾಚಾರ್, ಶಶಿಧರ್, ಅಶ್ವತ್ಥಾಮ ಇತರರಿದ್ದರು.
ಬಾಗಿನ ಅರ್ಪಣೆಗೆ ಸಿಎಂ ಆಗಮನ: ವಿವಿ ಸಾಗರ ಜಲಾಶಯದ ನೀರಿನ ಮಟ್ಟ ನೂರು ಅಡಿ ದಾಟಿದ್ದು, ಇದಕ್ಕೆ ಬಾಗಿನ ಅರ್ಪಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಲಾಗುವುದು. ಜಲಾಶಯ ನಿರ್ಮಿಸಿದ ಮೈಸೂರು ರಾಜ ವಂಶಸ್ಥರನ್ನು ಕಾರ್ಯಕ್ರಮಕ್ಕೆ ಕರೆಸಿ ಗೌರವಿಸಲಾಗುವುದು ಎಂದು ಶಾಸಕಿ ಪೂರ್ಣಿಮಾ ತಿಳಿಸಿದರು.
ಕೆರೆಗಳಿಗೆ ಭದ್ರಾ ನೀರು: ಧರ್ಮಪುರ ಕೆರೆಗೆ ಭದ್ರಾ ನೀರು ಹರಿಸಲು ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುವುದು. 3 ವರ್ಷದಲ್ಲಿ ಧರ್ಮಪುರ, ಇಕ್ಕನೂರು, ಕೋಡಿಹಳ್ಳಿ ಕೆರೆಗೆ ಮೊದಲ ಹಂತದಲ್ಲಿ ನೀರು ತುಂಬಿಸಲಾಗುವುದು. 2ನೇ ಹಂತದಲ್ಲಿ ಖಂಡೇನಹಳ್ಳಿ ಹೊಸಕೆರೆ, ಬೇತೂರು, ಮದ್ದಿಹಳ್ಳಿ, ಹಲಗಲದ್ದಿ, ಈಶ್ವರಗೆರೆ, ಅಬ್ಬಿನಹೊಳೆ ಇತರ ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ಪೂರ್ಣಿಮಾ ಮಾಹಿತಿ ನೀಡಿದರು.