ಹಿರಿಯೂರು: ಜಲಮೂಲ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಟಲ್ ಭೂಜಲ ಯೋಜನೆಗೆ ಹಿರಿಯೂರು, ಮೊಳಕಾಲ್ಮೂರು, ಚಳ್ಳಕೆರೆ ತಾಲೂಕುಗಳು ಸೇರ್ಪಡೆಯಾಗಿವೆ.
ಬಯಲು ಸೀಮೆಯಲ್ಲಿ ಯಾವುದೇ ಶಾಶ್ವತ ಜಲಮೂಲಗಳಿಲ್ಲ. ಮಳೆ ಕೊರತೆ, ಭೀಕರ ಬರ, ಅಂತರ್ಜಲ ಕುಸಿತದಿಂದ ಜನ-ಜಾನುವಾರು ಹನಿ ನೀರಿಗೂ ಪರಿತಪಿಸುವಂತಾಗಿದೆ. ಲಭ್ಯವಿರುವ ಪ್ರಾಕೃತಿಕ ಜಲಮೂಲ ಸಂರಕ್ಷಣೆ ಸವಾಲಾಗಿದ್ದು, ಪೂರ್ವಜರು ಕಟ್ಟಿಸಿದ ಕೆರೆ-ಕಟ್ಟೆ, ಹಳ್ಳಕೊಳ್ಳಗಳ ಅಭಿವೃದ್ಧಿ, ಹಸಿರೀಕರಣ, ನದಿ ಪಾತ್ರದಲ್ಲಿ ಚೆಕ್ ಡ್ಯಾಂ ನಿರ್ಮಾಣ, ಕೊಳವೆ ಬಾವಿಗಳ ಜಲಮರುಪೂರಣಕ್ಕೆ ಕೇಂದ್ರದ ಅನುದಾನ ಲಭ್ಯವಾಗಲಿದೆ.
ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು ತಾಲೂಕುಗಳಲ್ಲಿ ಅಂತರ್ಜಲ ಅಪಾಯದ ಮಟ್ಟ ತಲುಪಿದ್ದು, ಕೆಲ ಗ್ರಾಮಗಳಲ್ಲಿ ಪ್ಲೋರೈಡ್‌ಯುಕ್ತ ನೀರು ಸೇವಿಸುವ ಪರಿಸ್ಥಿತಿ ಇದೆ. ಈ ತಾಲೂಕು ವ್ಯಾಪ್ತಿಯಲ್ಲಿ ಶಾಶ್ವತ ಕುಡಿವ ನೀರಿನ ಯೋಜನೆ ರೂಪಿಸಲು ಅಟಲ್ ಭೂಜಲ ಯೋಜನೆ ನೆರವಾಗಲಿದೆ.
1200 ಕೋಟಿ ಅನುದಾನ ಲಭ್ಯ: ರಾಜ್ಯದ 14 ಜಿಲ್ಲೆಯ 40 ತಾಲೂಕುಗಳಲ್ಲಿ ಅಟಲ್ ಭೂಜಲ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ 1,201.52 ಕೋಟಿ ರೂ. ಅನುದಾನ ನೀಡಲಿದೆ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದರೆ ಭವಿಷ್ಯದಲ್ಲಿ ಜೀವಜಲ ಸಮಸ್ಯೆ ದೂರಾಗಲಿದೆ.
ಈಗಾಗಲೇ ಹಿರಿಯೂರು ತಾಲೂಕಿನ ವೇದಾವತಿ ನದಿ ಪಾತ್ರದಲ್ಲಿ ಬ್ಯಾರೇಜ್ ನಿರ್ಮಾಣ, ಜಲಾಮೃತ-ಕೆರೆ ಸಂಜೀವಿನಿ ಯೋಜನೆಗಳು ಪ್ರಗತಿಯಲಿದ್ದು, ಅಟಲ್ ಭೂಜಲ ಯೋಜನೆಯಡಿ ವಿಶೇಷ ಅನುದಾನ ಲಭ್ಯವಾಗುವುದರಿಂದ ಕೆರೆ, ಕಾಲುವೆ, ಹಳ್ಳ-ಕೊಳ್ಳಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಹೆಚ್ಚು ಸಹಕಾರಿ ಆಗಲಿದೆ.
ಖಂಡೇನಹಳ್ಳಿ ಬಸವರಾಜ್