ಹಿರಿಯೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಸುರಕ್ಷತೆಗೆ ಎಲ್ಲರೂ ಒಗ್ಗೂಡಿ ಶ್ರಮಿಸೋಣ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಮನವಿ ಮಾಡಿದರು.
ನಗರದ ರೋಟರಿ ಕ್ಲಬ್‌ನ ಎ.ಕೃಷ್ಣಪ್ಪ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವ ಸಿದ್ಧತಾ- ಮಾಸ್ಕ್ ವಿತರಣೆ ಸಭೆಯಲ್ಲಿ ಮಾತನಾಡಿದರು.
ಅನ್ಯ ರಾಜ್ಯಗಳಲ್ಲಿ ಕರೊನಾ ಭೀತಿಯಿಂದ ಪರೀಕ್ಷೆ ರದ್ದಾಗಿದ್ದರೂ ನಮ್ಮ ಸರ್ಕಾರ ರಾಜ್ಯದಲ್ಲಿ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮದೊಂದಿಗೆ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪರೀಕ್ಷಾ ಕೇಂದ್ರದಲ್ಲಿ ಪರಸ್ಪರ ಅಂತರ, ಸ್ಯಾನಿಟೈಸರ್, ಮಾಸ್ಕ್ ಬಳಕೆ ಇತರೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ತ್ರಿವೇಣಿ ಮಾತನಾಡಿ, ಈ ಬಾರಿ ಮಕ್ಕಳಿಗೆ ಪರೀಕ್ಷೆಯೊಂದಿಗೆ ಕರೊನಾ ಭಯ ಹೆಚ್ಚಾಗಿದ್ದು, ಪಾಲಕರು ಅವರಲ್ಲಿ ಧೈರ್ಯ ತುಂಬಿ, ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡಬೇಕು ಎಂದರು.
ಬಿಇಒ ರಾಮಯ್ಯ ಮಾತನಾಡಿ, ತಾಲೂಕಿನ 14 ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದ್ದು, ಕರೊನಾ ಹರಡದಂತೆ ಮುಂಜಾಗ್ರತೆ ವಹಿಸಲಾಗುವುದು. ತಾಲೂಕಿನ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ-ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮಾಸ್ಕ್‌ಗಳನ್ನು ನೀಡಿದ್ದಾರೆ ಎಂದರು.
ಶಿಕ್ಷಣ ತಜ್ಞ ನಾ.ತಿಪ್ಪೇಸ್ವಾಮಿ, ಜಿಪಂ ಸದಸ್ಯೆ ರಾಜೇಶ್ವರಿ, ತಹಸೀಲ್ದಾರ್ ಸತ್ಯನಾರಾಯಣ, ನಿವೃತ್ತ ಡೀನ್ ಎಂ.ಜಿ.ಗೋವಿಂದಯ್ಯ, ಬಿಜೆಪಿ ಮುಖಂಡ ಡಿ.ಟಿ.ಶ್ರೀನಿವಾಸ್, ನಗರಸಭಾ ಪೌರಾಯುಕ್ತೆ ಲೀಲಾವತಿ, ತಾಪಂ ಸದಸ್ಯ ಯಶವಂತರಾಜ್, ಅಕ್ಷರ ದಾಸೋಹ ಅಧಿಕಾರಿ ಎಲ್.ನಾಗರಾಜಾಚಾರ್, ಬಿಆರ್‌ಸಿ ರಾಘವೇಂದ್ರ, ಶಶಿಧರ್ ಇತರರಿದ್ದರು.