ಹಿರಿಯೂರು: ಒಳ್ಳೆಯ ನಡೆ-ನುಡಿಯಿಂದ ಉತ್ತಮ ವ್ಯಕ್ತಿತ್ವ ರೂಪಿಸಿಗೊಂಡರೆ ಯಶಸ್ಸಿನತ್ತ ಸಾಗಬಹುದು ಎಂದು ಚಿತ್ರನಟ ಜಗ್ಗೇಶ್ ಹೇಳಿದರು.
ತಾಲೂಕಿನ ಹೊಸಯಳನಾಡು ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸಂಕುಚಿತ ಮನೋಭಾವದಿಂದ ಹೊರ ಬಂದು ದೃಢತೆ ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸದೊಂದಿಗೆ ವೈಜ್ಞಾನಿಕವಾಗಿ ಪ್ರಜ್ಞಾವಂತರಾಗುವತ್ತ ಹೆಜ್ಜೆ ಇಡಬೇಕು ಎಂದು ತಿಳಿಸಿದರು.
ಪ್ರಶಾಂತ ವಾತಾವರಣದಲ್ಲಿ ಮೌನವಾಗಿ ಕುಳಿತು ದೊಡ್ಡ ಕನಸು ಕಾಣಬೇಕು. ಒಂದಲ್ಲ ಒಂದು ದಿನ ಯಶಸ್ಸು ಸಿಗುತ್ತದೆ. ಪಾಲಕರು ಉತ್ತಮ ದಾರಿಯಲ್ಲಿ ನಡೆದರೆ ಮಕ್ಕಳು ಅದನ್ನು ಅನುಸರಿಸಿ ಸುಸಂಸ್ಕೃತರಾಗುತ್ತಾರೆ ಎಂದರು.
ದಶಕಗಳ ಹಿಂದೆ ನಮ್ಮ ಗ್ರಾಮೀಣ ಸಂಸ್ಕೃತಿ, ಆಚಾರ-ವಿಚಾರ, ಗುರು-ಹಿರಿಯರನ್ನು ಗೌರವದಿಂದ ಕಾಣುತ್ತಿದ್ದೇವು. ಈಗ ಆ ಸಂಪ್ರದಾಯ ಇದೆಯಾ ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ಇಂದಿನ ಯುವ ಸಮೂಹ ನಮ್ಮ ಸಂಸ್ಕೃತಿ ಬಿಟ್ಟು ವಿದೇಶ ಸಂಸ್ಕೃತಿ ಮೈಗೂಡಿಸಿಕೊಂಡಿರುವುದು ದುರಂತ ಎಂದು ಬೇಸರಿಸಿದರು.
ಶಾಲೆಯ ಮಹಾಪೋಷಕ ನಾ.ತಿಪ್ಪೇಸ್ವಾಮಿ ಮಾತನಾಡಿ, ಜೀವನದಲ್ಲಿ ಒಮ್ಮೆ ಪ್ರಯತ್ನ ಮಾಡಿ ಸೋತರೂ ಪ್ರಯತ್ನಿಸುವುದನ್ನು ಬಿಡಬಾರದು. ಪ್ರಯತ್ನ ಮಾಡುವಲ್ಲಿ ವಿಫಲರಾದರೂ, ಪ್ರಯತ್ನವೇ ವಿಫಲವಾಗಲು ಬಿಡಬಾರದು ಎಂದರು.
ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಿಎಂ ಆಪ್ತ ಕಾರ್ಯದರ್ಶಿ ವಿಶ್ವನಾಥ್ ಹೀರೆಮಠ್, ಪ್ರಾಚಾರ್ಯ ಚಂದ್ರಯ್ಯ, ಬಿಇಒ ರಾಮಯ್ಯ, ಗ್ರಾಪಂ ಅಧ್ಯಕ್ಷೆ ಮೀನಾಕ್ಷಮ್ಮ, ಎಸ್‌ಡಿಎಂಸಿ ಅಧ್ಯಕ್ಷ ರಾಜಪ್ಪ, ಗುರುಸ್ವಾಮಿ, ನಿಜಲಿಂಗಪ್ಪ, ತಿಪ್ಪೇಸ್ವಾಮಿ, ನಿವೃತ್ತ ಎಸಿಪಿ ರಾಮಚಂದ್ರಪ್ಪ ಇತರರಿದ್ದರು.