ಹಿರಿಯೂರು: ತಾಲೂಕಿನಲ್ಲಿ ಮಾದಿಗ ಸಮುದಾಯದ ನೌಕರರಿಗೆ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲೂಕು ಅಧ್ಯಕ್ಷರ ಹೇಳಿಕೆಯನ್ನು ಮಾದಿಗ ಸಮುದಾಯದವರು ಖಂಡಿಸಿದರು.
ನಗರದ ಶಾಸಕರ ಕಚೇರಿಯಲ್ಲಿ ಸೋಮವಾರ ಬಿಜೆಪಿ ಆಯೋಜಿಸಿದ್ದ ಸಮುದಾಯದ ಸಭೆಯಲ್ಲಿ ಮಾತನಾಡಿದ ಮುಖಂಡರ ಸುಳ್ಳು ಆರೋಪದಿಂದ ಸಮುದಾಯಗಳ ಮಧ್ಯೆ ಕಂದಕ ಉಂಟಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಗರಸಭಾ ಮಾಜಿ ಅಧ್ಯಕ್ಷೆ ಮಂಜುಳಾ ಮಾತನಾಡಿ, ಮಾದಿಗ ಸಮುದಾಯದ ಮಹಿಳೆಯೊಬ್ಬಳು ನಗರಸಭೆ ಅಧ್ಯಕ್ಷೆ ಆಗಲು ಶಾಸಕರು ಪ್ರಮುಖ ಕಾರಣ. ಅವರ ಮೇಲೆ ಆರೋಪ ಸರಿಯಲ್ಲ ಎಂದು ಆಕ್ಷೇಪಿಸಿದರು.
ಬಿಜೆಪಿ ರಾಜ್ಯ ಯುವ ಮೋರ್ಚಾ ಕಾರ್ಯಕಾರಿ ಸದಸ್ಯ ಕೆ.ರಾಜಪ್ಪ ಮಾತನಾಡಿ, ಕಳೆದ ಎರಡು ವರ್ಷದ ಅವಧಿಯಲ್ಲಿ ಎಸ್‌ಸಿ ಕಾಲನಿಗಳ ಅಭಿವೃದ್ಧಿಗೆ ಅನುದಾನ ತಂದಿದ್ದು, ಸಮುದಾಯದ ಕಡುಬಡವರಿಗೆ ವೈಯಕ್ತಿಕವಾಗಿಯೂ ಸ್ಪಂದಿಸುತ್ತಿದ್ದಾರೆ ಎಂದರು.
ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ.ಪಿ.ಶ್ರೀನಿವಾಸ್ ಮಾತಾನಾಡಿ, ನೆನಗುದಿಗೆ ಬಿದ್ದಿದ್ದ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಶಾಸಕರ ಆಸಕ್ತಿಯಿಂದ ಈಡೇರಿದೆ. ಅಂಥವರ ವಿರುದ್ಧ ಇಲ್ಲಸಲ್ಲದ ಹೇಳಿಕೆ ಖಂಡನೀಯ ಎಂದು ತಿಳಿಸಿದರು.
ಮುಖಂಡರಾದ ಕೃಷ್ಣಾಪುರದ ಯಲ್ಲಪ್ಪ, ಮೋಹನ್, ಲಕ್ಷ್ಮಣ, ನಾಗರಾಜ್, ಕಾಟನಾಯಕನಹಳ್ಳಿ ಕೆ.ಸಿ.ತಿರುಮಲೇಶ್, ಓಬಾಳಪುರ ಸುರೇಶ್, ಕೋಡಿಹಳ್ಳಿ ಪ್ರಸನ್ನ, ಶ್ರವಣಗೆರೆ ರವಿಶಂಕರ್, ಬ್ಯಾರಮಡು ಸುಧಾಕರ್, ಓಂಕಾರ್, ಸಂತೋಷ್, ಏಕಾಂತ್ ಕಲ್ಲಹಟ್ಟಿ, ದಿಲೀಪ್, ಕರಿಸ್ವಾಮಿ, ನವೀನ್ ಇತರರಿದ್ದರು.