ಹಿರಿಯೂರು: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಕಾಂಗ್ರೆಸ್-ಜೆಡಿಎಸ್, ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರು ಮಾರ್ಗದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಮುಖ್ಯ ರಸ್ತೆ ಮೂಲಕ ನಗರದ ಹೃದಯ ಭಾಗದಲ್ಲಿರುವ ನೆಹರು ಮೈದಾನಕ್ಕೆ ಆಗಮಿಸಿ ಬಹಿರಂಗ ಪ್ರತಿಭಟನಾ ಸಭೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಡಿ.ಸುಧಾಕರ್ ಮಾತನಾಡಿ, ದೇಶದಲ್ಲಿ ಮುಸ್ಲಿಮರು ಪ್ರೀತಿ, ವಿಶ್ವಾಸ, ಐಕ್ಯತೆ ಜಾತ್ಯತೀತ ಮನೋಭಾವದಿಂದ ಬಾಳುತ್ತಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಈ ಸಮುದಾಯದಲ್ಲಿ ಆತಂಕ ಸೃಷ್ಟಿಸುವ ಕೆಲಸಕ್ಕೆ ಕೇಂದ್ರ ಸರ್ಕಾರ ಕೈಹಾಕಬಾರದು. ಸಂವಿಧಾನದ ಆಶಯಗಳನ್ನು ಗೌರವಿಸುವುದು ಕೇಂದ್ರದ ಆದ್ಯ ಕರ್ತವ್ಯವಾಗಬೇಕು ಎಂದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಸರ್ವ ಧರ್ಮಿಯರ ಪಾತ್ರವಿದೆ. ದೇಶದಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯ, ಆತಂಕ ಸೃಷ್ಟಿಸಲು ಕೇಂದ್ರ ಸರ್ಕಾರ ಸಿಎಎ, ಎನ್‌ಆರ್‌ಸಿ ಜಾರಿಗೊಳಿಸಲು ಹೊರಟಿರುವ ಕ್ರಮ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ ಕಾರ್ಯಕರ್ತೆ ಭವ್ಯಾ ನರಸಿಂಹಮೂರ್ತಿ ಮಾತನಾಡಿ, ಸಿಎಎ, ಎನ್‌ಆರ್‌ಸಿ ಕಾಯ್ದೆ ಮೂಲಕ ಪ್ರಗತಿಪರ ಚಿಂತಕರ ಧ್ವನಿ ಹತ್ತಿಕ್ಕಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರ, ದೇಶದ ಯುವ ಸಮೂಹದ ಉಜ್ವಲ ಭವಿಷ್ಯಕ್ಕೆ ಚಿಂತಿಸಬೇಕು ಎಂದರು.
ಬಿ.ಎಸ್.ನವಾಬ್ ಸಾಬ್, ಧರ್ಮಗುರುಗಳಾದ ಸಿಗ್ಬತ್ ಉಲ್ಲಾ, ವಸೀಂ ಮೌಲಾನ, ಅಬ್ದುಲ್ ಮೌಲಾನ, ಸಾದಿಕ್, ಮುನೀರ್ ಮುಲ್ಲಾ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಿ.ಎಸ್.ಸಾದತ್ ಉಲ್ಲಾ, ಮುಖಂಡರಾದ ಚಮನ್ ಷರೀಫ್, ಜಿ.ದಾದಾಪೀರ್, ಜಿಪಂ ಸದಸ್ಯರಾದ ಶಶಿಕಲಾ, ನಾಗೇಂದ್ರನಾಯ್ಕ, ಪಾಪಣ್ಣ, ಗೀತಾ, ತಾಪಂ ಸದಸ್ಯರಾದ ಓಂಕಾರಪ್ಪ, ಕರಿಯಪ್ಪ, ಜಿ.ಎಲ್.ಮೂರ್ತಿ, ಘಾಟ್ ರವಿ, ಶಿವಕುಮಾರ್, ಎಂ.ಡಿ.ಚಂದ್ರಶೇಖರ್, ಕಾಂಗ್ರೆಸ್ ಮುಖಂಡರಾದ ಜಿ.ಎಸ್.ಮಂಜುನಾಥ್, ತಾಜ್‌ಪೀರ್, ಎನ್.ಡಿ.ಕುಮಾರ್ ಇತರರಿದ್ದರು.