ಹಿರಿಯೂರು: ತಾಲೂಕಿನಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಮತ್ತೊಮ್ಮೆ ಲಾಕ್‌ಡೌನ್ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಬುಧವಾರ ಸಾಮರ್ಥ್ಯ ಸೌಧದಲ್ಲಿ ಆಯೋಜಿಸಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಆಗ್ರಹಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ಇದುವರೆಗಿನ ಐದು ಪಾಸಿಟಿವ್ ಪ್ರಕರಣಗಳಲ್ಲಿ ಇಬ್ಬರು ಚೇತರಿಸಿಕೊಂಡಿದ್ದಾರೆ. ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಪಾಸಿಟಿವ್ ಬಂದ ಸ್ಥಳದಿಂದ ನೂರು ಮೀಟರ್ ವಿಸ್ತೀರ್ಣದಲ್ಲಿ ಸೀಲ್‌ಡೌನ್ ಮಾಡಬಹುದು. ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆ, ಜೆಜಿ ಹಳ್ಳಿ, ಐಮಂಗಲ ವಸತಿ ಶಾಲೆಗಳಲ್ಲಿ ತಲಾ 50 ಹಾಸಿಗೆಗಳನ್ನು ಕೋವಿಡ್ ಪೀಡಿತರಿಗೆ ಮೀಸಲಿಟ್ಟಿದ್ದೇವೆ ಎಂದು ಹೇಳಿದರು.
ಬಬ್ಬೂರಿನಲ್ಲಿ ಆರೇಳು ವರ್ಷದ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಪತ್ರ ವ್ಯವಹಾರ ನಡೆಸಲಾಗಿತ್ತು. ಅದೇನಾಗಿದೆ ಎಂದೇ ತಿಳಿದಿಲ್ಲ. ಆರೋಗ್ಯಾಧಿಕಾರಿಗಳು ಅದನ್ನು ಗಮನಿಸಬೇಕು ಎಂದು ಓಂಕಾರಪ್ಪ ಆಗ್ರಹಿಸಿದರು.
ಕೋವಿಡ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಲು ರೋಗಿಗಳು ಹೆದರುತ್ತಿದ್ದು, ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಬಹುತೇಕ ಸದಸ್ಯರು ಸಲಹೆ ನೀಡಿದರು.
ಬೇತೂರು ಪಾಳ್ಯದ ಆರೋಗ್ಯ ಕೇಂದ್ರದಲ್ಲಿ ಆಂಬ್ಯುಲೆನ್ಸ್ ಇಲ್ಲ. ಇದ್ದ ನರ್ಸ್‌ಗಳನ್ನು ಧರ್ಮಪುರಕ್ಕೆ ನಿಯೋಜಿಸಿದ್ದಾರೆ. ಅವರನ್ನು ಮರಳಿ ಕಳಿಸಬೇಕು ಎಂದು ನಟರಾಜ್ ಮನವಿ ಮಾಡಿದರು.
ಅಧ್ಯಕ್ಷೆ ಲಕ್ಷ್ಮಿದೇವಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪುಷ್ಪಾ, ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ್, ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಉಪಸ್ಥಿತರಿದ್ದರು.
ನೀರಾವರಿ ಇಲಾಖೆ ಬೇಕಾಬಿಟ್ಟಿ ಕಾರ್ಯವೈಖರಿ: ರೈತರ ಹಿತ ಕಾಯಬೇಕಾದ ನೀರಾವರಿ ಇಲಾಖೆ ತನ್ನ ಕೆಲಸ ಮಾಡುತ್ತಿಲ್ಲ. ನೀರು ಬಿಡುವ ಬಗ್ಗೆ ಬೇಕಾಬಿಟ್ಟಿ ಆದೇಶಗಳು ಹೊರಟಿವೆ ಎಂದು ಯಶವಂತರಾಜು ದೂರಿದರು.
ಚಳ್ಳಕೆರೆ ಮತ್ತು ಮೊಳಕಾಲ್ಮೂರು ಕ್ಷೇತ್ರಕ್ಕೆ 0.50 ಟಿಎಂಸಿ ಅಡಿ ನೀರು ಬಿಡಲು ಆದೇಶವಿದ್ದು, 2.12 ಟಿಎಂಸಿ ಅಡಿ ನೀರು ಹರಿಸಲಾಗಿದೆ. ಹೆಚ್ಚು ನೀರು ಹರಿಸಿದ್ದು ಏಕೆ? ಈ ವರ್ಷ ಜಲಾಶಯಕ್ಕೆ ನೀರು ಬರದಿದ್ದರೆ ಹೊಣೆಯನ್ನು ಯಾರು ಹೊರಬೇಕು. ನೀರಿನ ಸಂರಕ್ಷಣೆ ಮಾಡುವುದು ನಿಮ್ಮ ಹೊಣೆಯಲ್ಲವೆ ಎಂದು ಪ್ರಶ್ನಿಸಿದರು.
ಗಾಯತ್ರಿ ಜಲಾಶಯಕ್ಕೆ ಪೈಪ್‌ಲೈನ್ ಮೂಲಕ ವಾಣಿ ವಿಲಾಸದ ನೀರು ಕೊಡಬಹುದಿತ್ತು. ಅಂತಹ ಪ್ರಯತ್ನವೇ ನಡೆಯದಿರುವುದು ಬೇಸರದ ಸಂಗತಿ. ಜಲಾಶಯದ ನೀರು ಮೊದಲು ನಮ್ಮ ತಾಲೂಕಿನ ದಾಹ ತೀರಿಸಬೇಕಲ್ಲವೆ? ಎಂದು ಜಯರಾಮಯ್ಯ ಕೇಳಿದರು.
ವಾಣಿವಿಲಾಸ ನಾಲೆಗಳ ಸ್ವಚ್ಛತೆಗೆ ಬಿಡುಗಡೆಯಾದ ಹಣ, ನಡೆದಿರುವ ಕಾಮಗಾರಿ ಬಗ್ಗೆ ಮಾಹಿತಿ ನೀಡುವಂತೆ ಓಂಕಾರಪ್ಪ ಒತ್ತಾಯಿಸಿದರು.