ವಿಶ್ವಕ್ಕೇ ಭಾರತ ಪರಿಚಯಿಸಿದ ವಿವೇಕಾನಂದ

ಚಿಕ್ಕಮಗಳೂರು:ಪರಿಚಿತವಲ್ಲದ ದೇಶಕ್ಕೆ ಪರಿಚಯವಿಲ್ಲದ ವ್ಯಕ್ತಿಯಾಗಿ ತೆರಳಿ ಪರಿಚಯ ಪತ್ರವನ್ನೂ ಕಳೆದುಕೊಂಡು ಅವಕಾಶ ಪಡೆದು ತಮ್ಮ ಭಾಷಣದ ಮೂಲಕ ವಿಶ್ವಕ್ಕೆ ಭಾರತವನ್ನು ಪರಿಚಯಿಸಿದವರು ಸ್ವಾಮಿ ವಿವೇಕಾನಂದರು ಎಂದು ವಾಗ್ಮಿ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ, ನೆಹರು ಯುವ ಕೇಂದ್ರ ಹಾಗೂ ಯುವಜನ ಸೇವಾ ಇಲಾಖೆ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿವೇಕಾನಂದರ ಷಿಕಾಗೋ ಭಾಷಣದ 125ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ವಿವೇಕಾನಂದರಿಗೆ ಭಾರತ ಒಂದು ಜಾತಿಯ ದೇಶವಾಗಿರಲಿಲ್ಲ. ಅದು ಹಲವು ಜಾತಿಗಳ, ಸರ್ವ ಜನಾಂಗದ ಸುಂದರ ತೋಟವಾಗಿತ್ತು. ಭಾರತ ದೇಶದ ಸಂಸ್ಕೃತಿ ಒಂದು ಮಾನವೀಯ ಸಂಸ್ಕೃತಿ ಎಂಬುದನ್ನು ಜಗತ್ತಿಗೆ ತಿಳಿಸಲು ಅವರು ಸರ್ವಧರ್ಮ ಸಮ್ಮೇಳನಕ್ಕೆ ತೆರಳಿದರೆಂದು ಪ್ರತಿಪಾದಿಸಿದರು.

ದೇಹವನ್ನು ಪ್ರೀತಿಸುವಂತೆಯೇ ದೇಶವನ್ನೂ ಪ್ರೀತಿಸಬೇಕು. ದೇಹದ ಮೇಲಿನ ಮಮಕಾರದಲ್ಲಿ ದೇಶಕ್ಕೆ ನೋವು ಆಗಬಾರದು. ಇದು ವಿವೇಕಾನಂದರ ಧ್ಯೇಯ. ವಿವೇಕಾನಂದ ಅವರು ಷಿಕಾಗೋದಲ್ಲಿ ಮೂರೂವರೆ ನಿಮಿಷ ಮಾಡಿದ ಭಾಷಣ 125 ವರ್ಷಗಳ ನಂತರವೂ ಚಪ್ಪಾಳೆ ಗಿಟ್ಟಿಸುತ್ತಿದೆ. ಹಾಗಾಗಿ ವಿವೇಕಾನಂದ ಕೇವಲ ಈ ದೇಶದ ಸಂತರು ಮಾತ್ರವಲ್ಲ. ಅವರು ವಿಶ್ವವಿಜೇತರು ಎಂದರು.

ಪ್ರಾಸ್ತಾವಿಕವಾಗಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿದರು. ವಿವೇಕಾನಂದರ ಕುರಿತು ಹಲವು ಗೀತೆಗಳನ್ನು ಗಾಯಕಿ ರೇಖಾ ಪ್ರೇಂಕುಮಾರ್ ಹೇಳಿಕೊಟ್ಟರು. ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿ.ರಮೇಶ್, ಉಪನ್ಯಾಸಕಿ ನಾಗಶ್ರೀ ಇತರರಿದ್ದರು.

ಚಿಕ್ಕಮಗಳೂರಿನಿಂದ ಷಿಕಾಗೋವರೆಗೂ ಸಂಬಂಧ !: ಚಿಕ್ಕಮಗಳೂರಿನ ಅಳಸಿಂಗ ಪೆರುಮಾಳ್ ಅಂದಿನ ಮದರಾಸಿನ ತನ್ನ ಮನೆಯಲ್ಲಿ 20 ದಿನಗಳ ಕಾಲ ವಿವೇಕಾನಂದ ಅವರನ್ನು ಸತ್ಕರಿಸಿ ಷಿಕಾಗೋ ಧರ್ಮ ಸಮ್ಮೇಳನಕ್ಕೆ ಭಾರತದ ಪ್ರತಿನಿಧಿಯಾಗಿ ತೆರಳುವಂತೆ ಪ್ರೇರಣೆ ನೀಡಿದವರು.

ಹೀಗೆ ವಿಶ್ಲೇಷಿಸಿದವರು ಹಿರೇಮಗಳೂರು ಕಣ್ಣನ್. ವಿವೇಕಾನಂದ ಅವರನ್ನು ಸತ್ಕರಿಸಿದ ಪೆರುಮಾಳ್ ಶಿಕ್ಷಣ ಪಡೆದಿರುವುದು ನಗರದ ಬಸವನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ. ಚಿಕ್ಕಮಗಳೂರಿನಿಂದ ಷಿಕಾಗೋವರೆಗೂ ಒಂದು ಸಂಬಂಧವಿದೆ. ಈ ನಗರದಲ್ಲಿ ಶಾಲೆ ಕಲಿತವರು ಜಗತ್ತಿನ ಎಲ್ಲಿಯವರೆಗೆ ತಮ್ಮನ್ನು ಬಿಂಬಿಸಿಕೊಳ್ಳಬಹುದು ಎನ್ನುವುದಕ್ಕೆ ಒಂದು ಅಂಕುರಾರ್ಪಣವಾಗಲಿ ಎನ್ನುವ ಕಾರಣಕ್ಕಾಗಿ ವಿದ್ಯಾರ್ಥಿಗಳನ್ನೇ ಇಲ್ಲಿಗೆ ಕರೆಸಿಕೊಂಡಿರುವುದಾಗಿ ಹೇಳಿದರು.

ವಿವೇಕಾನಂದರು ಅಮೆರಿಕಾಕ್ಕೆ ತೆರಳುವಾಗ ಅವರ ಬಳಿ ಹಣವಿರಲಿಲ್ಲ. ಅಳಸಿಂಗ ಪೆರುಮಾಳ್ ಅವರೇ ಹಣ ಸಂಗ್ರಹಿಸಿ ಒತ್ತಾಸೆ ನೀಡಿದ ಮೇರೆಗೆ ಹಡಗನ್ನೇರಿ ಹೊರಟ ವಿವೇಕಾನಂದರು ಅಪಹಾಸ್ಯ, ಹೊಟ್ಟೆ ಹಸಿವು ಅನುಭವಿಸಿದರೂ ಯಾವುದಕ್ಕೂ ಹಿಂಜರಿಯದೆ ದೇಶದ ತಾತ್ವಿಕ ಹಿರಿಮೆಯನ್ನು ಸಾಗರದಾಚೆಗೆ ಒಯ್ದು ತಿಳಿಸಿದರು. ಇದಕ್ಕೆ ಮೂಲ ಅಸ್ತಿತ್ವ ಒದಗಿಸಿಕೊಟ್ಟಿದ್ದು ಇಲ್ಲಿನ ನೆಲ, ಜಲ, ಇಲ್ಲಿನ ವಿದ್ಯೆ ಎನ್ನುವುದನ್ನು ಮರೆಯುವಂತಿಲ್ಲ ಎಂದರು.