ಮದ್ಯ ಬಿಟ್ಟು ಕುಟುಂಬದ ಕೀರ್ತಿ ಹೆಚ್ಚಿಸಿ

ಚಿಕ್ಕಮಗಳೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಧಾರ್ವಿುಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ವೃದ್ಧಿಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿವಿಧ ಸಂಘ ಸಂಸ್ಥೆಗಳೊಂದಿಗೆ ಹಿರೇಮಗಳೂರಿನಲ್ಲಿ ಬುಧವಾರ ಆಯೋಜಿಸಿದ್ದ 1238ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ನಾನಾ ಕಾರಣಗಳಿಗೆ ಮದ್ಯ ವ್ಯಸನಿಗಳಾದವರನ್ನು ಮದ್ಯ ವರ್ಜಕರನ್ನಾಗಿ ಮಾಡುವುದು ಉತ್ತಮ ಕೆಲಸ. ಒಬ್ಬ ಮದ್ಯ ಮುಕ್ತನಾದರೆ ಒಂದು ಕುಟುಂಬದ ಜತೆ ಸ್ವಚ್ಛ ಸ್ವಮಾಜ ನಿರ್ವಣಕ್ಕೂ ಸಹಕಾರಿಯಾಗುತ್ತದೆ ಎಂದರು.

ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ, ಕುಡಿದು ಕುಟುಂಬ ಬಡಿದು ಮಲಗುವುದಕ್ಕಿಂತ ದುಡಿದು ಬದುಕಿದರೆ ಮಾದರಿ ಕುಟುಂಬವಾಗುತ್ತದೆ. ಸಂಜೆ ಕುಡಿದು ಮೈ ನಂಜು ಮಾಡಿಕೊಂಡರೆ ಆರೋಗ್ಯ ಹಾಳಾಗುತ್ತದೆ. ಚಟಕ್ಕೆ ಬೆಂಕಿ ಹಚ್ಚಿ, ಮನೆಯಲ್ಲಿ ದೀಪ ಹಚ್ಚಿದರೆ ಕಟುಂಬದಲ್ಲಿ ನಂದಾ ದೀಪ ಸದಾ ಬೆಳಗುತ್ತದೆ. ಮದ್ಯ ಬಿಟ್ಟು ಕುಟುಂಬದ ಕೀರ್ತಿ ಹೆಚ್ಚಿಸುವುದಕ್ಕೆ ಕಾರಣರಾಗಬೇಕು ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್. ಮೂರ್ತಿ ಮಾತನಾಡಿ, ಆರೋಗ್ಯದ ಜತೆ ಆರ್ಥಿಕವಾಗಿ ಹಾಳು ಮಾಡುವ ಮದ್ಯ ಚಟದಿಂದ ಮುಕ್ತ ಮಾಡಲು ದೇವರ ರೂಪದಲ್ಲಿ ಧರ್ಮಸ್ಥಳ ಸಂಸ್ಥೆ ಬಂದಿದೆ. ಇದರ ಸದುಪಯೋಗ ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕು ಎಂದರು.