ಹಿರೇಬಾಗೇವಾಡಿ: ಪ್ರಧಾನಿ ಮೋದಿಗೆ ವಿಶ್ವ ಖ್ಯಾತಿಯ ಮನ್ನಣೆ

ಹಿರೇಬಾಗೇವಾಡಿ: ವಿಶ್ವದಲ್ಲೇ ಗೌರವಯುತ ಪ್ರಧಾನಿಯೆಂದು ಗುರುತಿಸಿಕೊಂಡಿರುವ ಖ್ಯಾತಿ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಮತ್ತು ಚಿತ್ರ ನಟಿ ತಾರಾ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಪ್ರಚಾರಾರ್ಥ ಸಂಸದ ಸುರೇಶ ಅಂಗಡಿಯವರ ಪರವಾಗಿ ಹಿರೇಬಾಗೇವಾಡಿಯಲ್ಲಿ ಶುಕ್ರವಾರ ರೋಡ್ ಶೋ ಮೂಲಕ ಮತ ಯಾಚಿಸಿ ಮಾತನಾಡಿ, ಮುದ್ರಾ, ಸುಕನ್ಯಾ ಸಮೃದ್ಧಿ ಸೇರಿ ಹಲವಾರು ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದವರು ಪ್ರಧಾನಿ ಮೋದಿ. ನರೇಂದ್ರ ಮೋದಿಯವರನ್ನು ಹೊರತುಪಡಿಸಿ ಬೇರೆ ಯಾರಾದರೂ ಪ್ರಧಾನಿ ಸ್ಥಾನಕ್ಕೆ ಯೋಗ್ಯರಿದ್ದಾರಾ ಎಂಬುದನ್ನು ತಾಳೆ ಹಾಕಿ ನೋಡಿ.

ಮೋದಿಯಲ್ಲದೇ ಬೇರಾರೂ ನಮ್ಮ ದೇಶವನ್ನು ಮುನ್ನಡೆಸಲು ಯೋಗ್ಯರಿಲ್ಲ. ಅವರಿಂದಲೇ ನಮ್ಮ ದೇಶ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ವಿರೋಧ ಪಕ್ಷ ಎಂಬ ರಾವಣನನ್ನು ಬಿಜೆಪಿ ಎಂಬ ಬಾಣ ಬಿಟ್ಟು ನಾಶ ಮಾಡಬೇಕು ಎಂದರು.

ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ನರೇಂದ್ರ ಮೋದಿ ದಿನದ 18 ಗಂಟೆ ಕೆಲಸ ಮಾಡುತ್ತಿದ್ದಾರೆ. ಇಂಥ ದೇಶ ಪ್ರೇಮಿ ಪ್ರಧಾನಿಯನ್ನು ಭಾರತ 70 ವರ್ಷಗಳಲ್ಲಿ ಕಂಡಿಲ್ಲ. ಇದು ಸುರೇಶ ಅಂಗಡಿ ಅಥವಾ ಸಾಧುನವರ ನಡುವಿನ ಚುನಾವಣೆ ಅಲ್ಲ. ಇದು ದೇಶಪ್ರೇಮಿಗಳ ಮತ್ತು ದೇಶದ್ರೋಹಿಗಳ ನಡುವಿನ ಚುನಾವಣೆ. ದೇಶ ಪ್ರೇಮಿಯಾದ ಮೋದಿಯವರ ಕೈ ಬಲಪಡಿಸಿ. ಪ್ರಧಾನಿ ಎಂದರೇನು ಎಂಬುದನ್ನು ನರೇಂದ್ರ ಮೋದಿಯವರು ಜಗತ್ತಿಗೇ ತೋರಿಸಿ ಕೊಟ್ಟಿದ್ದಾರೆ. ಆಮಿಶಗಳಿಗೆ ಬಲಿಯಾಗದೇ ಸಧೃಢ ಭಾರತ ನಿರ್ಮಾಣಕ್ಕಾಗಿ ಬಿಜೆಪಿಗೆ ಮತ ನೀಡಿರಿ ಎಂದರು.

ಬೆಳಗಾವಿ ಗ್ರಾಮೀಣ ಬಿಜೆಪಿ ಬ್ಲಾಕ್ ಅಧ್ಯಕ್ಷ ಮೋಹನ ಅಂಗಡಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕಲಾವತಿ ಧರೆಣ್ಣವರ, ಮಾಜಿ ಶಾಸಕ ಸಂಜಯ ಪಾಟೀಲ, ಬಿಜೆಪಿ ಬೆಳಗಾವಿ ಗ್ರಾಮೀಣ ಪ್ರಭಾರಿ ಜಗದೀಶ ಹಿರೇಮನಿ, ಬೆಳಗಾವಿ ಗ್ರಾಮೀಣ ಬಿಜೆಪಿ ಬ್ಲಾಕ್ ಅಧ್ಯಕ್ಷ ಮೋಹನ, ರಾಜ್ಯ ಕಾರ್ಯಕಾರಿಣಿ ಮಹಿಳಾ ಮೋರ್ಚಾ ಸದಸ್ಯೆ ಜಯಶ್ರೀ ಪಾಟೀಲ, ಈರಣ್ಣ ಕಡಾಡಿ, ಎಪಿಎಂಸಿ ಉಪಾಧ್ಯಕ್ಷೆ ರೇಣುಕಾ ಪಾಟೀಲ, ಗಿರೀಜಾ ಮಠಪತಿ, ಭಂಡಾರಿ, ಯಲ್ಲಪ್ಪ ಧರೆಣ್ಣವರ, ಫಡಿಗೌಡ ಹಾದಿಮನಿ, ಮಂಜುನಾಥ ಧರೆಣ್ಣವರ ಇತರರು ಇದ್ದರು.