ಕಾಶ್ಮೀರ ವಿಚಾರದಲ್ಲಿ ಮತ್ತೆ ಓಪನ್​ ಆಫರ್​ ಕೊಟ್ಟ ಡೊನಾಲ್ಡ್​ ಟ್ರಂಪ್​: ಪ್ರಧಾನಿ ಮೋದಿ, ಇಮ್ರಾನ್​ಗೆ ಕರೆ ಮಾಡಿದ ಬೆನ್ನಲ್ಲೇ ಟ್ರಂಪ್​ ಮಾತು​

ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೋನಾಲ್ಡ್​​ ಟ್ರಂಪ್​ ಮಂಗಳವಾರ ಮತ್ತೊಮ್ಮೆ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ತಿಕೆ ವಹಿಸುವುದಾಗಿ ತಿಳಿಸಿದ್ದು, ಕಾಶ್ಮೀರ ಒಂದು ಸಂಕೀರ್ಣವಾದ ಸ್ಥಳ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ಗೆ ಟ್ರಂಪ್​ ಕರೆ ಮಾಡಿ ಮಾತನಾಡಿದ ದಿನದ ಬಳಿಕ ಮತ್ತೆ ಈ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗೆ ಧರ್ಮವೇ ಪ್ರಮುಖ ಕಾರಣವಾಗಿದೆ ಎಂದು ಹೇಳಿರುವ ಟ್ರಂಪ್​, ಕಾಶ್ಮೀರ ಒಂದು ಸಂಕೀರ್ಣವಾದ ಸ್ಥಳವಾಗಿದೆ. ನೀವು ಹಿಂದು ಮತ್ತು ಮುಸ್ಲಿಂರನ್ನು ಹೊಂದಿದ್ದೀರಿ, ನೀವು ಕಾಶ್ಮೀರವನ್ನು ಒಟ್ಟಿಗೆ ತೆಗದುಕೊಂಡು ಹೋದರೆ ದೊಡ್ಡವರಾಗುತ್ತೀರ ಎಂದು ಹೇಳುವುದಿಲ್ಲ. ನಾನು ಉತ್ತಮವಾದುದ್ದನ್ನೇ ಮಾಡುತ್ತೇನೆ. ಬೇಕಾದರೆ ಮಧ್ಯಸ್ತಿಕೆ ವಹಿಸುತ್ತೇನೆ ಎಂದು ವೈಟ್​ಹೌಸ್​ನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ನೀವು ಎರಡು ಪ್ರಾಂತ್ಯಗಳನ್ನು ಹೊಂದಿದ್ದೀರಾ, ದೀರ್ಘಕಾಲದವರೆಗೆ ಅವು ಉತ್ತಮವಾದದ್ದನ್ನು ಪಡೆದಿಲ್ಲ. ಇದೀಗ ಸ್ಫೋಟಕ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ನಾವು ಸಹಾಯ ಮಾಡಬೇಕೆಂದುಕೊಂಡಿದ್ದೇನೆ. ಆದರೆ, ನಿಮಗೆ ತಿಳಿದಿರುವಂತೆ ಎರಡು ದೇಶಗಳ ನಡುವೆ ಸಾಕಷ್ಟು ಸಮಸ್ಯೆ ಇದೆ. ಹಾಗೆಯೇ ಇಬ್ಬರ ಜತೆ ಒಳ್ಳೆಯ ಸಂಬಂಧವೂ ಇದೆ. ಆದರೆ, ಈ ಸಮಯದಲ್ಲಿ ಅವರು ಸ್ನೇಹಿತರಂತೆ ವರ್ತನೆ ಮಾಡುತ್ತಿಲ್ಲ. ಇದು ಗೊಂದಲದ ಪರಿಸ್ಥಿತಿಯಾಗಿದ್ದು, ಧರ್ಮದೊಂದಿಗೆ ಬಹಳಷ್ಟು ಸಂಬಂಧವಿದೆ. ಧರ್ಮವೇ ಒಂದು ಸಂಕೀರ್ಣ ವಿಚಾರವಾಗಿದೆ ಎಂದು ತಿಳಿಸಿದ್ದಾರೆ.

ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ ಒಪ್ಪಿದರೆ ಮಧ್ಯಸ್ತಿಕೆ ವಹಿಸುವುದಾಗಿ ಮುಂಚೆಯೇ ಟ್ರಂಪ್​ ಹೇಳಿದ್ದರು. ಇಮ್ರಾನ್​ ಖಾನ್​ರೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮಧ್ಯಸ್ತಿಕೆ ವಹಿಸುವಂತೆ ಕೋರಿದ್ದಾರೆ ಎಂದು ಹೇಳಿದ್ದರು. ಆದರೆ, ಟ್ರಂಪ್​ ಹೇಳಿಕೆಯನ್ನು ಭಾರತ ತಿರಸ್ಕರಿಸಿತ್ತು. (ಏಜೆನ್ಸೀಸ್​)

One Reply to “ಕಾಶ್ಮೀರ ವಿಚಾರದಲ್ಲಿ ಮತ್ತೆ ಓಪನ್​ ಆಫರ್​ ಕೊಟ್ಟ ಡೊನಾಲ್ಡ್​ ಟ್ರಂಪ್​: ಪ್ರಧಾನಿ ಮೋದಿ, ಇಮ್ರಾನ್​ಗೆ ಕರೆ ಮಾಡಿದ ಬೆನ್ನಲ್ಲೇ ಟ್ರಂಪ್​ ಮಾತು​”

  1. ಕಾಶ್ಮೀರದ ವಿಷಯ ಈಗಾಗಲೆ ಪರಿಹಾರವಾಗಿದ್ದು ಅಮೆರಿಕದ ಅಧ್ಯಕ್ಷರು ಮೂಗು ತೂರಿಸುವ ಅಗತ್ಯವಿಲ್ಲ

Leave a Reply

Your email address will not be published. Required fields are marked *