ಹಿಂದು ಧರ್ಮ ನಾಶ ಅಸಾಧ್ಯ

ಗೋಕರ್ಣ: ಹಿಂದು ಧರ್ಮ ಉಳಿದ ಧರ್ಮಗಳಂತೆ ಮಾನವ ನಿರ್ವಿುತವಲ್ಲ. ಅದು ಅಪೌರುಷೇಯವಾದುದು. ಇದರಿಂದಾಗಿಯೇ ಅದನ್ನು ಹೊರಗಿನ ಯಾವ ಶಕ್ತಿಗಳೂ ನಾಶ ಮಾಡಲಾರವು ಎಂದು ಹಿರಿಯ ಧಾರ್ವಿುಕ ಚಿಂತಕ ಡಾ. ಕೆ.ಎಸ್. ನಾರಾಯಣಾಚಾರ್ಯ ಹೇಳಿದರು.

ವೇದವ್ಯಾಸ ಪ್ರತಿಷ್ಠಾನ ವತಿಯಿಂದ ಶನಿವಾರ ಕವಳೇಮಠ ಸಭಾಂಗಣದಲ್ಲಿ ಪ್ರಾರಂಭವಾದ ಮಹಾಭಾರತ ಉಪನ್ಯಾಸ ಮಾಲಿಕೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಮಾಯಣ ಮಹಾಭಾರತದ ಬಗ್ಗೆ ಹಗುರವಾಗಿ ಮಾತನಾಡುವವರಿದ್ದಾರೆ. ಆದರೆ ಇವುಗಳು ಹುಡುಗಾಟವಲ್ಲ. ಇವುಗಳ ಅಸ್ತಿತ್ವದ ಬಗ್ಗೆ ಬೇಕಾದಷ್ಟು ದಾಖಲೆಗಳಿವೆ. ಇತ್ತೀಚಿನ ದಿನಗಳಲ್ಲಿ ಬೌದ್ಧಿಕ ವಾದಿಗಳು ಎಂದು ಕರೆದುಕೊಳ್ಳುವ ಕೆಲವರು ರಾಮನ ಬದಲು ರಾವಣನ ಪೂಜೆಗೆ ಮುಂದಾಗಿದ್ದಾರೆ. ರಕ್ಕಸ ಮಹಿಷಾಸುರನ ಜಯಂತಿ ಆಚರಿಸುವವರೂ ಇದ್ದಾರೆ. ಇದಕ್ಕೆಲ್ಲ ಪ್ರೇರಣೆ ಹಾರ್ವರ್ಡ್​ನಲ್ಲಿದೆ. ನಮ್ಮ ಸನಾತನ ವಿಚಾರ ಧಾರೆಯ ಒಳ ಪ್ರವೇಶಿಸಿ ಅವುಗಳ ನಾಶವನ್ನು ನಮ್ಮ ಗ್ರಂಥಗಳನ್ನು ಕೆಡಿಸುವ ಮುಖಾಂತರ ಮಾಡಲಾಗುತ್ತಿದೆ. ನಮ್ಮ ಟಿವಿ ಮಾಧ್ಯಮಗಳನ್ನು ಇಂತಹ ದುಷ್ಟ ಶಕ್ತಿಗಳು ಕೊಂಡುಕೊಳ್ಳುತ್ತಿವೆ. ನಮ್ಮಲ್ಲಿಯ ಅನೇಕರು ತಮ್ಮ ಮೂಲತ್ವದಿಂದ ದೂರಾಗುತ್ತಿದ್ದಾರೆ. ಆದರೆ ಇದಕ್ಕೆ ತದ್ವಿರುದ್ಧ ಪ್ರಕ್ರಿಯೆಯಲ್ಲಿ ಪಾಶ್ಚಿಮಾತ್ಯರಿದ್ದಾರೆ. ಅವರಿಗೆ ಕ್ರಿಶ್ಚಿಯಾನಿಟಿ ಬೇಕಾಗಿಲ್ಲ. ಅವರು ನಮ್ಮ ಸನಾತನ ಪರಂಪರೆಯ ಭಕ್ತರಾಗುತ್ತಿದ್ದಾರೆ ಎಂದು ವಿವರಿಸಿದರು.

ಪತ್ರಕರ್ತ ವಿನಾಯಕ ಭಟ್ಟ ಮೂರೂರು ಮಾತನಾಡಿ, ರಾಮಾಯಣ ಮಹಾಭಾರತವನ್ನು ಹೇಳುವವರು ಮತ್ತು ಕೇಳುವವರು ಇಂದು ಕಡಿಮೆಯಾಗುತ್ತಿದ್ದಾರೆ. ಇವುಗಳು ಪರಂಪರೆಯಿಂದ ನಮಗೆ ಕೊಟ್ಟ ಮೌಲ್ಯಗಳು ಯಾರಿಗೂ ಬೇಕಿಲ್ಲ. ಇಂದಿನದನ್ನು ಕಳೆದರೆ ಸಾಕು. ಅದೇ ಬದುಕು ಎಂಬ ಪ್ರಜ್ಞೆಯತ್ತ ಸಮಾಜ ಸಾಗುತ್ತಿರುವುದು ವಿಷಾದನೀಯ ಎಂದರು.

ಕುಮಾರಿ ಅರುಧತಿ ಶಾಸ್ತ್ರಿ ಆಚಾರ್ಯರಿಗೆ ಮಾಲಾರ್ಪಣೆ ಮಾಡಿದಳು. ಪ್ರತಿಷ್ಠಾನದ ವೇ. ಶ್ರೀಧರ ಭಟ್ಟ, ಯಕ್ಷಗಾನದ ಹಿರಿಯ ಕಲಾವಿದ ಅನಂತ ಹಾವಗೋಡಿ, ಡಾ.ಮಹಾಬಲಮೂರ್ತಿ ಶಾಸ್ತ್ರಿ, ಮಹೇಶ ಹಿರೇಗಂಗೆ ಇತರರು ಇದ್ದರು.