ಹಿಂದು-ಮುಸ್ಲಿಂ ಜೋಡಿ ಪ್ರೇಮ ವಿವಾಹ ಸಿದ್ಧತೆ, ಕುಟುಂಬಗಳ ಜತೆ ಪೊಲೀಸ್ ಮಾತುಕತೆ

ವಿಜಯವಾಣಿ ಸುದ್ದಿಜಾಲ ಮಂಗಳೂರು
ಮುಸ್ಲಿಂ ಯುವಕ ಮತ್ತು ಹಿಂದು ಯುವತಿ ಪ್ರೇಮ ವಿವಾಹ ಆಮಂತ್ರಣ ಪತ್ರಿಕೆ ಬಹಿರಂಗಗೊಂಡ ಬಳಿಕ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಗುರುವಾರ ಡಿಸಿಪಿ ಹನುಮಂತರಾಯ ನೇತೃತ್ವದಲ್ಲಿ ಸುರತ್ಕಲ್ ಠಾಣೆಯಲ್ಲಿ ಮಾತುಕತೆ ನಡೆದಿದೆ.

ಚೇಳಾರುವಿನ ಹಿಂದು ಯುವತಿ ಹಾಗೂ ತಡಂಬೈಲ್ ಮಹಮ್ಮದ್ ಸಲೀಂ ಯಾನೆ ಪ್ರವೀಣ್ ಹಲವು ಸಮಯದಿಂದ ಪ್ರೀತಿಸುತ್ತಿದ್ದು, ವಿವಾಹವಾಗಲು ನಿರ್ಧರಿಸಿದ್ದರು. ಇವರ ಮದುವೆ ಜ.20ರಂದು ಕಟೀಲು ದೇವಸ್ಥಾನದಲ್ಲಿ ನಡೆಸಲು ಉಭಯ ಕುಟುಂಬಗಳು ನಿರ್ಧರಿಸಿ, ಆಮಂತ್ರಣ ಪತ್ರಿಕೆ ಹಂಚಿದ್ದರು. ಇದನ್ನು ತಿಳಿದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ರೂಪದಲ್ಲಿ ಆಮಂತ್ರಣ ಪತ್ರಿಕೆ, ಸಂದೇಶಗಳನ್ನು ಹಾಕುತ್ತಿದ್ದಾರೆ.

ಗುರುವಾರ ಬೆಳಗ್ಗೆ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ಸುರತ್ಕಲ್ ಠಾಣೆಯಲ್ಲಿ ಎರಡೂ ಕುಟುಂಬದವರನ್ನು ಕರೆದು ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಸುರತ್ಕಲ್ ಇನ್‌ಸ್ಪೆಕ್ಟರ್ ಕೆ.ಜಿ. ರಾಮಕೃಷ್ಣ ಉಪಸ್ಥಿತರಿದ್ದರು. ಉಭಯ ಕುಟುಂಬಗಳು ವಿವಾಹಕ್ಕೆ ಸಮ್ಮತಿ ಸೂಚಿಸಿವೆ. ಯುವಕ-ಯುವತಿ ಪ್ರಬುದ್ಧರಾಗಿರುವ ಕಾರಣ ಅವರ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಲಾಗಿದೆ.

ತಾಯಿ ಹಿಂದು: ಮಹಮ್ಮದ್ ಸಲೀಂ ಅವರ ತಾಯಿ ಹಿಂದು. ಮೂಲತಃ ಶಿವಮೊಗ್ಗದವರಾಗಿರುವ ಇವರು ಕಳೆದ 25 ವರ್ಷಗಳಿಂದ ಚೇಳಾರುವಿನಲ್ಲಿ ವಾಸಿಸುತ್ತಿದ್ದು, ಹಿಂದು ಧರ್ಮದ ನಂಬಿಕೆ, ಆಚರಣೆ ಮೇಲೆ ವಿಶೇಷ ಪ್ರೀತಿಯಿದೆ. ಹಿಂದುಗಳ ಜತೆಗೆ ಹೆಚ್ಚು ಸ್ನೇಹದಲ್ಲಿರುವ ಮಹಮ್ಮದ್ ಸಲೀಂ 4 ವರ್ಷಗಳಿಂದ ಶಬರಿಮಲೆ ಮಾಲೆ ಹಾಕಿ ವ್ರತಾಚರಣೆ ಮಾಡಿ ಯಾತ್ರೆ ಹೋಗುತ್ತಿದ್ದಾರೆ. ಈ ಬಾರಿ ಜ.6ರಂದು ಶಬರಿಮಲೆ ಯಾತ್ರೆಗೆ ತೆರಳಲಿದ್ದಾರೆ.

ಎರಡೂ ಕುಟುಂಬದವರನ್ನು ಕರೆಸಿ ಮಾತುಕತೆ ನಡೆಸಲಾಗಿದೆ. ಕಾನೂನು ಪ್ರಕಾರ ವಿವಾಹವಾಗಲು ಅವರು ಅರ್ಹರು. ಜೀವ ಬೆದರಿಕೆಗಳಿದ್ದು, ಅಪೇಕ್ಷೆ ಪಟ್ಟರೆ ಇಲಾಖೆಯಿಂದ ಬೇಕಾದ ರಕ್ಷಣೆ, ಸಹಕಾರ ನೀಡಲು ಸಿದ್ಧ.
-ಹನುಮಂತರಾಯ, ಡಿಸಿಪಿ

ನಮ್ಮದು ಹಲವು ವರ್ಷಗಳ ಪ್ರೀತಿ. ಜ.20ರಂದು ವಿವಾಹವಾಗಲು ನಿರ್ಧಾರ ಮಾಡಿ ಆಮಂತ್ರಣ ಪತ್ರಿಕೆ ಮುದ್ರಿಸಿದ್ದೆವು. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮೂಲಕ ಕೆಲವರು ಅಡ್ಡಿ ಮಾಡುತ್ತಿದ್ದಾರೆ. ಇದರಿಂದ ಕಿರಿಕಿರಿಯಾಗಿದ್ದು, ಮದುವೆಯೇ ಬೇಡವೆನಿಸುತ್ತಿದೆ. ಶಬರಿಮಲೆ ಯಾತ್ರೆ ಮುಗಿಸಿದ ಬಳಿಕ ಮದುವೆ ಕುರಿತು ನಿರ್ಧರಿಸಲಾಗುವುದು.
-ಮಹಮ್ಮದ್ ಸಲೀಂ, ಯುವಕ