ಯಾವುದೇ ಭಾಷೆ ಹೇರುವುದು ನೀತಿಯ ಉದ್ದೇಶವಲ್ಲ: ಹಿಂದಿ ಕುರಿತ ಸಾಲುಗಳು ತಾಂತ್ರಿಕ ಲೋಪ, ಅವು ನೀತಿಯ ಭಾಗವೇ ಅಲ್ಲ

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಇಡೀ ದೇಶದಲ್ಲಿ ಹಿಂದಿ ಹೇರಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಕೂಗು, ಇದೀಗ ಆ ಸಾಲುಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ ಎನ್ನುವ ಬೆನ್ನಲ್ಲೇ ಆ ಸಾಲುಗಳು ನೀತಿಯ ಭಾಗವೇ ಅಲ್ಲ ಎಂಬ ಅಂಶವನ್ನು ಸಮಿತಿ ಸದಸ್ಯ ಪ್ರೊ.ಎಂ.ಕೆ. ಶ್ರೀಧರ್ ತಿಳಿಸಿದ್ದಾರೆ.

| ರಮೇಶ ದೊಡ್ಡಪುರ, ಬೆಂಗಳೂರು

‘ವಿಜಯವಾಣಿ’ಗೆ ಈ ಕುರಿತು ಸಂದರ್ಶನ ನೀಡಿರುವ ಶ್ರೀಧರ್, ಆ ಸಾಲುಗಳು ಕರಡು ರಾಷ್ಟ್ರೀಯ ನೀತಿಯಲ್ಲಿ ನುಸುಳಿದ ಬಗೆಯನ್ನು ಸಾಕ್ಷಿ ಸಮೇತ ತಿಳಿಸಿದ್ದಾರೆ. ನೀತಿ ರೂಪಿಸುವಾಗ ಅನೇಕ ಬಾರಿ ಪರಿಷ್ಕರಣೆ ಆಗಿದೆ. ಒಂದು ಹಂತದಲ್ಲಿ ಬರೆದ ಸಾಲುಗಳು ಪರಿಷ್ಕರಣೆ ಹಂತದಲ್ಲಿ ಕೈಬಿಡಬೇಕು ಎಂದು ನಿರ್ಧಾರವಾಗುತ್ತಿದ್ದವು. ಅಂತೆಯೇ, ಹಿಂದಿ ರಾಜ್ಯಗಳು ಹಾಗೂ ಹಿಂದೀಯೇತರ ರಾಜ್ಯಗಳು ಎಂಬ ಸಾಲುಗಳನ್ನು ಕೈಬಿಡಬೇಕು ಎಂದು ನಿರ್ಧಾರವಾಗಿತ್ತು. ಹಾಗೆ ಸಮಿತಿ ಸದಸ್ಯರು ಸಹಿ ಮಾಡಿರುವ ಪುಸ್ತಕಗಳಲ್ಲಿ ಆ ಸಾಲುಗಳಿಲ್ಲ. (ಪುಸ್ತಕದ ಪ್ರತಿಯನ್ನು ತೋರಿಸಿದರು). ಆದರೆ ಸರ್ಕಾರಕ್ಕೆ ವರದಿ ಸಲ್ಲಿಸುವ ಸಮಯದಲ್ಲಿ ಅಚಾತುರ್ಯದಿಂದ, ಪರಿಷ್ಕರಣೆಗೂ ಹಿಂದಿನ ಪ್ಯಾರಾ ನುಸುಳಿ ಬಿಟ್ಟಿತ್ತು. ಕೆಲವರು ಇದನ್ನು ತಿಳಿಸಿದ್ದರಿಂದ ನಮಗೂ ಈ ವಿಚಾರ ಅರಿವಾಗಿ, ಇದೀಗ ಅವುಗಳನ್ನು ತೆಗೆಸಲಾಗಿದೆ. ಹಿಂದಿ ಅಥವಾ ಬೇರೆ ಯಾವುದೇ ಭಾಷೆಯನ್ನು ಹೇರುವುದು ಸಮಿತಿ ಸದಸ್ಯರ ಹಾಗೂ ಒಟ್ಟಾರೆ ನೀತಿಯ ಉದ್ದೇಶವೇ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

# ನೀತಿ ರೂಪಿಸಲಾರಂಭಿಸಿದ ಮೊದಲ ಸಭೆಯ ಒಟ್ಟಾರೆ ಚರ್ಚೆ ಸ್ವರೂಪ ಹೇಗಿತ್ತು?

ನಮ್ಮ ಸಮಿತಿ ಕೆಲಸ ಮಾಡಿದ್ದು ಹೊಸ ನೀತಿಗಲ್ಲ. ಈ ಹಿಂದೆ ಹಲವಾರು ಕೆಲಸ ಆಗಿದ್ದ ನೀತಿಯನ್ನು ಮುಂದುವರಿಸಿಕೊಂಡು ಹೋಗುವುದಲ್ಲದೆ, ಅದಕ್ಕೊಂದು ರ್ತಾಕ ಅಂತ್ಯ ಮುಟ್ಟಿಸಬೇಕು ಎಂಬುದು ಮುಖ್ಯ ಉದ್ದೇಶ. ಹಿಂದೆಲ್ಲ ಈ ಬಗ್ಗೆ ಏನೇನು ಸಲಹೆ- ಪ್ರತಿಕ್ರಿಯೆ ಬಂದಿದೆ ಎಂಬುದನ್ನೇ ತಂತ್ರಜ್ಞಾನ ಬಳಸಿ ವಿಶ್ಲೇಷಿಸಲಾಯಿತು. ಒಟ್ಟಾರೆ ಸಲಹೆಗಳಲ್ಲಿ ಯಾವ ಕಡೆ ಹೆಚ್ಚು ಒತ್ತು ಇದೆ ಎಂಬುದು ತಿಳಿಯಿತು. ಹೆಚ್ಚಿನ ಸಲಹೆಗಳು ಪಠ್ಯಕ್ರಮದ ಬಗ್ಗೆ ಇದ್ದವು. ಎರಡನೆಯದಾಗಿ, ಶಿಕ್ಷಣ ವ್ಯವಸ್ಥೆ ಒಳಗಿರುವವರು ತಮ್ಮ ಹಾಗೂ ವ್ಯವಸ್ಥೆಯಲ್ಲಿನ ತೊಂದರೆ ಹೇಳಿಕೊಂಡಿದ್ದರು. ದೇಶದಲ್ಲಿ ಶಿಕ್ಷಣ ಕುರಿತು ರಚಿಸಲಾದ ಸಮಿತಿಗಳ ಶಿಫಾರಸುಗಳು, ವಿಶ್ವದ ಇತರ ದೇಶಗಳಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿದೆ ಎಂಬುದನ್ನೂ ಗಣನೆಗೆ ತೆಗೆದುಕೊಂಡೆವು. ಇದೆಲ್ಲದರ ಫಲಿತಾಂಶವಾಗಿ 25 ಪ್ರಮುಖ ವಿಷಯಗಳನ್ನು ಆರಿಸಿಕೊಂಡು, ಪ್ರತಿ ವಿಷಯದಲ್ಲೂ ಸ್ಥಿತಿ-ಗತಿ ವರದಿ ಸಿದ್ಧಪಡಿಸಿ ಮುಂದಿನ ಚರ್ಚೆ ಆರಂಭಿಸಿದೆವು.

# ನೀತಿಯ ಅಗತ್ಯವೆಷ್ಟು? ಯಾಕಾಗಿ ಇದು?

ನೀತಿ ಇಲ್ಲದೆಯೂ ಕೆಲಸ ಮಾಡಬಹುದು. ಆದರೆ, 90ರ ದಶಕದ ನಂತರದ ಜಾಗತೀಕರಣ, ಇತ್ತೀಚಿನ ತಂತ್ರಜ್ಞಾನ ಕ್ರಾಂತಿಯಲ್ಲಿ ಒಂದು ಹೊಸ ಸನ್ನಿವೇಶ ನಿರ್ವಣವಾಗಿದೆ. ಜತೆಗೆ, ಭಾರತಕ್ಕೆ ನಮ್ಮದೇ ಆದ ನೈಜ ಶಿಕ್ಷಣ ನೀತಿ ಬೇಕು ಎಂಬ ಅಪೇಕ್ಷೆ ಇತ್ತು. ಜಗತ್ತಿನಲ್ಲಿ ಇಂದು ಭಾರತಕ್ಕೆ ಮಾನ್ಯತೆ ಸಿಗುತ್ತಿರುವಾಗ ನಮ್ಮದು ಎನ್ನುವ ನೀತಿ ಇರಬೇಕು ಎಂಬುದು ಮುಖ್ಯ.

# ಒಂದೆಡೆ ಸಂಶೋಧನೆಗೆ ಒತ್ತು, ಇನ್ನೊಂದೆಡೆ ಉತ್ಪಾದನೆ ಕ್ಷೇತ್ರಕ್ಕೆ ಅನುಗುಣವಾಗಿ ವ್ಯಕ್ತಿಗಳನ್ನು ರೂಪಿಸುವ ಕಾರ್ಯ ಒಟ್ಟಿಗೆ ಸಾಗಲು ಸಾಧ್ಯವೇ?

ಕೈಗಾರಿಕೆಗೆ ಅವಶ್ಯಕವಾಗಿ ಎನ್ನುವುದಕ್ಕಿಂತಲೂ, ಅದಕ್ಕನುಗುಣ ಕೌಶಲ ರೂಪಿಸಿಕೊಳ್ಳಲು ಒತ್ತು ನೀಡಿದ್ದೇವೆ. ಸಂಶೋಧನೆ ಬಗ್ಗೆ ಹೆಚ್ಚು ಹೇಳಿದ್ದೇವೆ. ಹಾಗೆಂದು ಎಲ್ಲರೂ ಸಂಶೋಧನೆ ಮಾಡಬೇಕೆಂದಿಲ್ಲ. ಆದರೆ ಎಲ್ಲರಲ್ಲೂ ಆ ಸಂಶೋಧನೆಯ ಸಂಸ್ಕೃತಿ ಬೆಳೆಯಬೇಕು ಎಂಬುದಕ್ಕೆ ಮಹತ್ವ ನೀಡಿದ್ದೇವೆ.

# ಪಠ್ಯ-ಪಠ್ಯೇತರದ ನಡುವೆ ಹೆಚ್ಚಿನ ವ್ಯತ್ಯಾಸ ಬೇಡ ಎಂದು ಹೇಳಿರುವ ಉದ್ದೇಶವೇನು?

ಪಠ್ಯ-ಪಠ್ಯೇತರ ಎಂದ ತಕ್ಷಣ ಒಂದಕ್ಕೆ ಹೆಚ್ಚು ಪ್ರಾಶಸ್ಱ, ಇನ್ನೊಂದಕ್ಕೆ ಕಡಿಮೆ ಎನ್ನುವ ವಾತಾವರಣ ಮೂಡುತ್ತದೆ. ಎಲ್ಲವೂ ಸೇರಿದ್ದು ಶಿಕ್ಷಣವೇ ಹೊರತು, ಶರೀರದ ಒಂದು ಭಾಗಕ್ಕೆ ಮಾತ್ರ ಸೀಮಿತವಾದದ್ದು ಶಿಕ್ಷಣವೇ ಅಲ್ಲ.

# ಈ ನೀತಿಯಿಂದ ಪರೀಕ್ಷೆ ಕುರಿತ ಒತ್ತಡ ತಗ್ಗುತ್ತದೆಯೇ?

ಇದಕ್ಕೆ ಪರೀಕ್ಷೆಯ ವಿಧಾನ ಹಾಗೂ ಅಂಕಗಳಿಗೆ ನೀಡುತ್ತಿರುವ ಹೆಚ್ಚು ಒತ್ತು ಕಾರಣ. ನಾವು ಹೇಳುತ್ತಿರುವುದು ಸಮಗ್ರ ಶಿಕ್ಷಣ. ಯಾರು ಯಾವುದರಲ್ಲಿ ಆಸಕ್ತಿ ಹೊಂದಿರುತ್ತಾರೋ ಅದರಲ್ಲಿ ಮುಂದುವರಿಯಲು ಸಾಧ್ಯ ಆಗಬೇಕು. ಸಚಿನ್ ತೆಂಡೂಲ್ಕರ್ ಅವರನ್ನು ಎಷ್ಟು ಅಂಕ ಗಳಿಸಿದ್ದಾರೆ ಎಂಬುದರಿಂದ ಅಳೆಯುವುದಿಲ್ಲ. ಈ ನೀತಿಯಿಂದ ಪರೀಕ್ಷೆ ಕುರಿತ ಒತ್ತಡ ತಗ್ಗುತ್ತದೆ. ಮನುಷ್ಯನ ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ಧಿ ಆಗುತ್ತದೆ.

# ವಿಭಿನ್ನ ಕ್ಷೇತ್ರಗಳಲ್ಲಿನ ಪ್ರತಿಭೆ ಗುರುತಿಸಲು ಮಾನದಂಡಗಳು ಬೇಕಲ್ಲವೇ?

ಮೌಲ್ಯಮಾಪನದ ವಿಧಾನವನ್ನು ಈ ವರದಿಯಲ್ಲಿ ಸಂಪೂರ್ಣ ವಿವರಿಸಿದ್ದೇವೆ. ಉದಾಹರಣೆಗೆ, ಕಾಲ್ ಎಕ್ಸಾಮ್ ವಿಚಾರ ಪ್ರಸ್ತಾಪಿಸಿದ್ದೇವೆ. 10, 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ತಮಗೆ ಅನುಕೂಲವಾದಾಗ ತೆಗೆದುಕೊಳ್ಳಬಹುದು. ಇದಕ್ಕೆ ಡಿಜಿಟಲ್ ಪರೀಕ್ಷೆ ನಡೆಸಬೇಕಾಗುತ್ತದೆ. ಇಂಥ ಅನೇಕ ಬದಲಾವಣೆ ಸೂಚಿಸಿದ್ದೇವೆ.

# ಇಂಗ್ಲಿಷ್ ಪ್ರಾಮುಖ್ಯತೆ ಕಡಿಮೆ ಮಾಡುವ ಉದ್ದೇಶ ಇದೆಯೇ?

ನಮ್ಮ ಭಾಷೆಗಳಿಗೆ ಏಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂಬುದಕ್ಕೆ ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಆದರೆ ಇಂಗ್ಲಿಷ್ ಕಲಿಯಬಾರದು ಎಂಬುದು ನಮ್ಮ ಉದ್ದೇಶವಲ್ಲ. ಹಾಗೆ ಯಾವುದೇ ಭಾಷೆಯನ್ನು ಕಲಿಯಲೇಬೇಕು ಎಂದೂ ಇಲ್ಲ.

# ತಂತ್ರಜ್ಞಾನ ಯುಗದಲ್ಲಿ ಯಾವುದೇ ನೀತಿಯಿಂದ ಯಾವುದೇ ಭಾಷೆಯ ಬೆಳವಣಿಗೆಯ ನಿಯಂತ್ರಣ ಸಾಧ್ಯವೇ?

ಅದು ಸಾಧ್ಯವಿಲ್ಲ, ಆ ರೀತಿ ನಮ್ಮ ಸಮಿತಿ ಭಾವಿಸಿಲ್ಲ. ತ್ರಿಭಾಷಾ ಸೂತ್ರ ಆಧಾರವಾಗಿಸಿಕೊಂಡು ಈ ನೀತಿ ರೂಪಿಸಿದ್ದೇವೆ. ಆ ಮೂರು ಭಾಷೆ ಯಾವುದಿರಬೇಕು ಎಂಬುದಕ್ಕೆ ಸ್ಥಾನಿಕ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಎಂದು ಪ್ರತ್ಯೇಕಿಸಿದ್ದೇವೆ.

# ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ವ್ಯಾಖ್ಯಾನ ಬದಲಾಗಬೇಕೇ?

ಬದಲಾಗಬೇಕೆಂದು ನಾವು ಹೇಳಿಲ್ಲ. ಆದರೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಎಂದು ಸೂಚಿಸುವ ಮೂಲಾರ್ಥ ಏನು? ಮ್ಯಾನೇಜ್​ವೆುಂಟ್ ಯಾರಿರುತ್ತಾರೆ ಎಂಬುದಲ್ಲ. ಬದಲಿಗೆ ಆ ನೀತಿಯಿಂದ ಯಾರಿಗೆ ಉಪಯೋಗ ಆಗುತ್ತದೆ ಎಂಬುದು ಇರಬೇಕು ತಾನೇ?

# ನೀತಿ ಜಾರಿಗೆ ವ್ಯವಸ್ಥೆಯಲ್ಲಿ ಎಷ್ಟು ಬದಲಾವಣೆ ಆಗಬೇಕು?

ಸಣ್ಣಪುಟ್ಟ ಬದಲಾವಣೆಗಳಿಂದ ಏನೂ ಆಗದು. ಅದರಿಂದ ಒಂದಷ್ಟು ದಿನ ಗಾಡಿ ಓಡಿ ಮತ್ತೆ ಕೆಟ್ಟು ನಿಲ್ಲುತ್ತದೆ. ಆಮೂಲಾಗ್ರ ಬದಲಾವಣೆಯೇ ಆಗಬೇಕು.

# ನೀತಿ ಜಾರಿಯಿಂದ ಆಗುವ ಬದಲಾವಣೆ ಏನು?

ಜಗತ್ತಿನಲ್ಲಿ ನಮ್ಮದೇ ಆದ ಒಂದು ಸ್ತರ ಸ್ಥಾಪನೆಯಾಗುತ್ತದೆ. ಉದಾಹರಣೆಗೆ, ಶಿಕ್ಷಕರ ತರಬೇತಿ ಎಂದ ತಕ್ಷಣ ಇಡೀ ವಿಶ್ವ ಫಿನ್ಲೆಂಡ್ ಕಡೆ ನೋಡುತ್ತದೆ. ಅದೇ ರೀತಿ ಶಿಕ್ಷಣ ಎಂದ ಕೂಡಲೇ ಜಗತ್ತು ನಮ್ಮ ಕಡೆ ನೋಡುವಂತಾಗುತ್ತದೆ. ಆಗ ಮಾತ್ರ ನಾವು ಜಗತ್ತಿಗೆ ಏನಾದರೂ ಕೊಡುಗೆ ನೀಡಲು ಸಾಧ್ಯ.

# ಹಿಂದಿ ಹೇರಿಕೆ ವಿವಾದ ಏಕೆ ಬಂತು?

ಇದು ವಿವಾದ ಎಂದೇನಲ್ಲ, ಅವರವರ ಅಭಿಪ್ರಾಯ. ಹಿಂದಿ ಅಷ್ಟೇ ಅಲ್ಲ, ಯಾವುದೇ ಭಾಷೆಯನ್ನು ಯಾರ ಮೇಲೂ ಹೇರಬಾರದು ಎಂಬುದು ಸಮಿತಿಯಲ್ಲಿರುವ ಎಲ್ಲರ ಆಶಯ. ಯಾವ ಭಾಷೆ ಬೇಕು ಎಂಬುದನ್ನು ಆರಿಸಿಕೊಳ್ಳುವ ಅವಕಾಶ ವಿದ್ಯಾರ್ಥಿಗಳಿಗೇ ನೀಡಬೇಕು. ಭಾರತದ ಬೇರೆ ರಾಜ್ಯಗಳ ಭಾಷೆಯನ್ನೂ ಕಲಿತಾಗಲೇ ಭಾರತ ಒಂದು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಬರುತ್ತದೆ. ಉತ್ತರ ಭಾರತದ ರಾಜ್ಯಗಳೂ ದಕ್ಷಿಣದ ಭಾಷೆಗಳನ್ನು ಆರಿಸಿಕೊಳ್ಳಲು ಅವಕಾಶವಿದೆ.

# ಈ ನೀತಿ ಜಾರಿಯಲ್ಲಿ ರಾಜ್ಯ ಸರ್ಕಾರಗಳ ಪಾತ್ರ, ಸ್ವಾತಂತ್ರ್ಯ ಎಷ್ಟು?

ಪ್ರಮುಖವಾಗಿ ಇಡೀ ಶಿಕ್ಷಣ ವ್ಯವಸ್ಥೆಯ ಆಧಾರವೇ ಪ್ರಾಥಮಿಕ ಶಿಕ್ಷಣ. ಅದು ಬಹುತೇಕ ರಾಜ್ಯ ಸರ್ಕಾರದ ಬಳಿಯೇ ಇರುತ್ತದೆ. ಕೇಂದ್ರ ಸರ್ಕಾರ ಒಂದು ಮಟ್ಟವನ್ನು ಸೂಚಿಸುತ್ತದೆ ಅಷ್ಟೇ. ಆದರೆ ಸಂಪೂರ್ಣ ಜಾರಿ ಮಾಡುವ ಹೊಣೆ ರಾಜ್ಯ ಸರ್ಕಾರದ ಮೇಲೆಯೇ ತಾನೇ? ಹಾಗಾಗಿ ರಾಜ್ಯ ಸರ್ಕಾರದ ಪಾತ್ರ ಬಹುಮುಖ್ಯ. ಆಯಾ ರಾಜ್ಯಗಳಿಗೆ ಅನುಗುಣವಾಗಿ ಎಲ್ಲ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿದೆ.

Leave a Reply

Your email address will not be published. Required fields are marked *