ಭಾರತದ ವರ್ಚಸ್ಸಿಗೆ ಹಾನಿ ಹಿಂಡನ್​ಬರ್ಗ್ ಹಿಡನ್ ಅಜೆಂಡಾ?

| ರಾಘವ ಶರ್ಮ ನಿಡ್ಲೆ

ಭಾರತದ ಅಭಿವೃದ್ಧಿಗಾಥೆಯನ್ನೇ ಗುರಿಯಾಗಿಸಿ, ವಿಶ್ವ ಮಾರುಕಟ್ಟೆಯಲ್ಲಿ ವರ್ಚಸ್ಸಿಗೆ ಹಾನಿ ಮಾಡುವುದೇ ಈ ವಿದೇಶಿ ಸಂಸ್ಥೆಗಳ ಉದ್ದೇಶವಿರಬಹುದೇ ಎನ್ನುವುದು 2023ರಿಂದಲೂ ಇರುವ ಗಂಭೀರ ವಾದ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದ್ದು, ಕೇಂದ್ರ ಸರ್ಕಾರ ಕೂಡ ಇದೇ ಆರೋಪವನ್ನು ಮಾಡುತ್ತ ಬಂದಿದೆ.

ಸೆಕ್ಯುರಿಟೀಸ್ ಆಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಉದ್ಯಮಿ ಗೌತಮ್ ಅದಾನಿ ನಂಟಿನ ಬಗ್ಗೆ ಹಿಂಡನ್​ಬರ್ಗ್ ಸಂಸ್ಥೆ ಮಾಡಿರುವ ಆರೋಪಗಳು ದೇಶಾದ್ಯಂತ ಈಗ ಚರ್ಚೆಗೆ ಗ್ರಾಸವಾಗಿರುವುದರ ಬೆನ್ನಲ್ಲೇ ‘ಭಾರತದ ಆಂತರಿಕ ವಿಷಯದ ಬಗ್ಗೆ ವಿದೇಶಿ ಸಂಸ್ಥೆಯೊಂದು ತೋರುತ್ತಿರುವ ಭಾರಿ ಆಸಕ್ತಿ’ ಬಗ್ಗೆಯೂ ಅಪಾರ ಸಂಶಯ ವ್ಯಕ್ತವಾಗುತ್ತಿದೆ.

ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಭ್ರಷ್ಟಾಚಾರ ಮಾಡಿದ್ದಾರೆ ಅಥವಾ ಲಂಚ ಸ್ವೀಕರಿಸಿದ್ದಾರೆ ಎನ್ನುವುದಕ್ಕೆ ಸ್ಪಷ್ಟ ಪುರಾವೆಗಳು ಬೇಕು. ಇಲ್ಲವಾದಲ್ಲಿ ಇದು ಕೇವಲ ಹಿಟ್ ಆಂಡ್ ರನ್ ರೀತಿಯ ಕೇಸ್ ಆಗಲಿದ್ದು, ರ್ತಾಕ ಅಂತ್ಯ ಕಾಣುವುದಿಲ್ಲ. ಆ ಕ್ಷಣಕ್ಕೆ ಕೇಂದ್ರ ಸರ್ಕಾರ, ಅದಾನಿ ಸಮೂಹ ಮತ್ತು ಮಾರುಕಟ್ಟೆ ನಿಯಂತ್ರಕ ಸೆಬಿಯನ್ನು ಗುರಿ ಮಾಡಿ, ವಿಶ್ವ ಮಾರುಕಟ್ಟೆಯಲ್ಲಿ ಭಾರತದ ವರ್ಚಸ್ಸಿಗೆ ಹಾನಿ ಮಾಡುವ ಪ್ರಕ್ರಿಯೆ ಆಗಬಹುದು ಅಷ್ಟೇ.

2023ರ ಹಿಂಡನ್​ಬರ್ಗ್ ವರದಿಯಲ್ಲೂ ಆಗಿದ್ದು ಅಷ್ಟೇ. ಅಂದಿನ ಹಿಂಡನ್​ಬರ್ಗ್ ವರದಿಯನ್ನು ಇಟ್ಟುಕೊಂಡು, ಕೇಂದ್ರ ಸರ್ಕಾರವನ್ನು ಮತ್ತು ಅದಾನಿ ಸಮೂಹವನ್ನು ಗುರಿ ಮಾಡಿದ್ದ ಹೋರಾಟಗಾರರು ಸುಪ್ರೀಂಕೋರ್ಟ್​ನಲ್ಲಿ ಭಾರೀ ಮುಖಭಂಗಕ್ಕೀಡಾಗಿದ್ದರು. ಮಾರುಕಟ್ಟೆಯಲ್ಲಿರುವ ವಿದೇಶಿ ಶಾರ್ಟ್ ಸೆಲ್ಲರ್ ಸಂಸ್ಥೆಯ ಗಂಭೀರ ಆಪಾದನೆಗಳ ಬಗ್ಗೆ ತನಿಖೆಯಾಗಬೇಕು ಎಂಬ ವಾದ ಸರಿಯಿದ್ದರೂ, ಈ ವಿದೇಶಿ ಸಂಸ್ಥೆಗಳ ಉದ್ದೇಶ ಏನು ಎಂಬುದು ಅಷ್ಟೇ ಪ್ರಮಾಣದಲ್ಲಿ ಪರಿಶೀಲನೆಗೆ ಒಳಪಡಬೇಕಿದೆ.

ಮೇಲಾಗಿ, ಉದ್ಯಮಿಗಳು ಮಾರುಕಟ್ಟೆಯಲ್ಲಿರುವ ಮತ್ತೋರ್ವ ಉದ್ಯಮಿಯನ್ನು ಹೇಗೆ ಟಾರ್ಗೆಟ್ ಮಾಡುತ್ತಾರೆ ಎನ್ನುವುದಕ್ಕೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮತ್ತು ದರ್ಶನ್ ಹಿರಾನಂದಾನಿ ಪ್ರಕರಣವೇ ತಾಜಾ ನಿದರ್ಶನ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ವಿರುದ್ಧ ಪ್ರಶ್ನೆಗಳನ್ನು ಕೇಳಲು ಹಾಗೂ ವರ್ಚಸ್ಸಿಗೆ ಹಾನಿ ಮಾಡಲು ದರ್ಶನ್ ಹಿರಾನಂದಾನಿ ಅವರಿಂದಲೇ ಹಣ, ಉಡುಗೊರೆಗಳನ್ನು ಪಡೆದಿದ್ದ ಮಹುವಾ, ಸಂಸತ್ ಸದಸ್ಯತ್ವದ ಹುದ್ದೆಯನ್ನು ದುರುಪಯೋಗಪಡಿಸಿಕೊಂಡ ಆರೋಪದಡಿ ಕಳೆದ ಲೋಕಸಭೆಯಿಂದ ಉಚ್ಛಾಟನೆಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಮಧ್ಯೆ, ಸುಪ್ರೀಂಕೋರ್ಟ್​ನ ವಕೀಲ ಜೈ ಅನಂತ್ ದೆಹದ್ರಾಯ್ ಅವರು ಹಿಂಡನ್​ಬರ್ಗ್​ನ ಈ ಸಲದ ವರದಿ ಬಗ್ಗೆ ತೀಕ್ಷ ್ಣ ಅಭಿಪ್ರಾಯ ಹೊರಹಾಕಿದ್ದಾರೆ. ‘ಸೆಬಿ ಅಧ್ಯಕ್ಷೆಯ ವಿರುದ್ಧದ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ. ಕ್ರಿಮಿನಲ್ ಚಟುವಟಿಕೆ ನಡೆದಿದೆ ಎಂಬ ಭ್ರಮೆ ಹುಟ್ಟಿಸಿದರೆ ಸಾಲದು. ಪೂರಕ ಸಾಕ್ಷ್ಯಗಳಿದ್ದರೆ ಮಾತ್ರ ಕೇಸು ನ್ಯಾಯಾಲಯದಲ್ಲಿ ಉಳಿಯುತ್ತದೆ. ಇಲ್ಲಿ ಅಪರಾಧ ನಡೆದಿದೆ ಎನ್ನಲು ಪೂರಕ ಅಂಶಗಳೇ ಇಲ್ಲ ಎಂದ ಮೇಲೆ ದೇಶದ ಯಾವುದೇ ಕ್ರಿಮಿನಲ್ ನ್ಯಾಯಾಲಯ ಹಿಂಡನ್​ಬರ್ಗ್ ವರದಿಯನ್ನು ಪರಿಗಣಿಸುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಪಕ್ಷಗಳ ನಿಲುವೇನು?: ತಕ್ಷಣದ ಕ್ರಮವಾಗಿ ಸೆಬಿ ಅಧ್ಯಕ್ಷೆ ಮಾಧವಿ ಬುಚ್​ರಿಂದ ಕೇಂದ್ರ ಸರ್ಕಾರ ರಾಜೀನಾಮೆ ಪಡೆಯಬೇಕು ಎಂದು ಕಾಂಗ್ರೆಸ್, ಟಿಎಂಸಿ ಸೇರಿ ಹಲವು ಪಕ್ಷಗಳ ಮುಖಂಡರು ಒತ್ತಾಯಿಸಿದ್ದಾರೆ. ಗೌತಮ್ ಅದಾನಿ ವಿರುದ್ಧ ಸಂಸತ್ ಒಳ-ಹೊರಗೆ ಆಪಾದನೆಗಳನ್ನು ಮಾಡುತ್ತಿದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕೂಡ ಮತ್ತೊಮ್ಮೆ ಕೇಂದ್ರ ಸರ್ಕಾರ, ಅದಾನಿ ಸಮೂಹ ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ. 2023ರ ಹಿಂಡನ್​ಬರ್ಗ್ ವರದಿ ಬಂದಿದ್ದಾಗಲೂ ವಿಪಕ್ಷಗಳು ಮೋದಿ-ಅದಾನಿ ಶಂಕಿತ ಸಂಬಂಧದ ಬಗ್ಗೆ ಗದ್ದಲ ಎಬ್ಬಿಸಿ, ಅಲ್ಲೋಲಕಲ್ಲೋಲ ಎಬ್ಬಿಸಿದ್ದವು. ಅದಾನಿ ವಿರುದ್ಧ ಆರೋಪಗಳು ಹೆಚ್ಚುತ್ತಿದ್ದಂತೆ, 15-20 ದಿನಗಳ ಕಾಲ ನಿತ್ಯವೂ ಅದಾನಿ ಷೇರುಗಳ ಬೆಲೆ ಶೇಕಡ 5ರಷ್ಟು ಕುಸಿಯುತ್ತಲೇ ಇದ್ದವು. ಜಂಟಿ ಸದನ ಸಮಿತಿ ರಚನೆ ಮಾಡಿ ಅದಾನಿ ಹಗರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಮಾಹಿತಿ ನೀಡಿದ್ದೆವು ಎಂದ ಬುಚ್ ದಂಪತಿ: ಭಾರತದ ಮಾರುಕಟ್ಟೆ ನಿಯಮಗಳ ಉಲ್ಲಂಘನೆಗಳಿಗಾಗಿ ಹಿಂಡೆನ್​ಬರ್ಗ್​ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅದಕ್ಕುತ್ತರಿಸುವ ಬದಲು ಸೆಬಿಯ ವಿಶ್ವಾಸಾರ್ಹತೆ ಮೇಲೆ ದಾಳಿ ಮಾಡಿ, ಸೆಬಿ ಅಧ್ಯಕ್ಷರ ಚಾರಿತ್ರ್ಯವಧೆಗೆ ಯತ್ನಿಸಿರುವುದು ದುರದೃಷ್ಟಕರ ಎಂದು ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಮತ್ತು ಪತಿ ಧವಲ್ ಬುಚ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಜತೆಗೆ, ಹಿಂಡನ್​ಬರ್ಗ್ ವರದಿಯಲ್ಲಿನ ಆರೋಪಗಳಿಗೆ 2 ಪುಟಗಳ ಸ್ಪಷ್ಟೀಕರಣವನ್ನೂ ನೀಡಿದ್ದಾರೆ.

ಹಿಂಡೆನ್​ಬರ್ಗ್ ವರದಿಯಲ್ಲಿ ಮಾಧವಿ ಬುಚ್ ಮತ್ತು ಧವಲ್ ಬುಚ್ ಅದಾನಿ ಷೇರುಗಳ ಜತೆ ನಂಟಿರುವ ಎರಡು ಫಂಡ್​ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಹೀಗಾಗಿ, ಅದಾನಿ ವಿರುದ್ಧ ಸೆಬಿ ತನಿಖೆಯಲ್ಲಿ ಸತ್ಯ ಹೊರಬರಲೇ ಇಲ್ಲ ಎಂದು ಹಿಂಡನ್​ಬರ್ಗ್ ಆರೋಪಿಸಿದೆ. ‘ನಾನು ಸೆಬಿ ಅಧ್ಯಕ್ಷೆಯಾಗಿ ನೇಮಕವಾಗುತ್ತಿದ್ದಂತೆ ಹೂಡಿಕೆ ತಕ್ಷಣವೇ ನಿಷ್ಕ್ರಿಯಗೊಂಡಿತು. ಈ ಕಂಪನಿಗಳ (ಮತ್ತು ಅವುಗಳಲ್ಲಿನ ಷೇರುಗಳು) ಬಗ್ಗೆ ಸೆಬಿಗೆ ಮಾಹಿತಿಯನ್ನೂ ನೀಡಲಾಗಿತ್ತು. ಸಿಂಗಾಪುರ್ ಘಟಕದ ಷೇರುಗಳು ಧವಲ್ ಹೆಸರಿಗೆ ವರ್ಗಾವಣೆಗೊಂಡಾಗಲೂ ಇದನ್ನು ಮತ್ತೊಮ್ಮೆ ಬಹಿರಂಗಪಡಿಸಲಾಯಿತು. ಸೆಬಿಗೆ ಮಾತ್ರವಲ್ಲ, ಸಿಂಗಾಪುರದ ಅಧಿಕಾರಿಗಳಿಗೆ ಮತ್ತು ಭಾರತೀಯ ತೆರಿಗೆ ಅಧಿಕಾರಿಗಳಿಗೂ ನೀಡಲಾಗಿತ್ತು’ ಎಂದು ಬುಚ್ ದಂಪತಿ ಹೇಳಿಕೆ ನೀಡಿದ್ದಾರೆ.

ಸೆಬಿಯಿಂದ ಹಿಂಡನ್​ಬರ್ಗ್​ಗೆ ಶೋಕಾಸ್ ನೋಟಿಸ್: ಕಳೆದ ಜುಲೈ 1ರಂದು ಹಿಂಡನ್​ಬರ್ಗ್ ಸಂಸ್ಥೆಗೆ ಸೆಬಿ ಶೋಕಾಸ್ ನೋಟಿಸ್ ನೀಡಿತ್ತು. 46 ಪುಟಗಳ ನೋಟಿಸ್​ನಲ್ಲಿ ಭಾರತೀಯ ಕಾನೂನು, ನಿಯಮಗಳ ಉಲ್ಲಂಘನೆಗಳ ಬಗ್ಗೆ ದಾಖಲಿಸಲಾಗಿತ್ತು. ತನ್ನ ವರದಿಯಿಂದಾಗಿ ಅದಾನಿ ಎಂಟರ್​ಪ್ರೖೆಸಸ್ ಷೇರು ಬೆಲೆ ಕುಸಿತದ ನಿರೀಕ್ಷೆಯಿದ್ದುದರಿಂದ ಹಿಂಡನ್​ಬರ್ಗ್ ಸಂಸ್ಥೆ ಕೆಲ ಸಂಸ್ಥೆಗಳೊಂದಿಗೆ ಸೇರಿಕೊಂಡು, ಷೇರು ಮಾರುಕಟ್ಟೆಯಲ್ಲಿ ಶಾರ್ಟ್ ಸೆಲ್ಲಿಂಗ್ ಮೂಲಕ ಲಾಭ ಮಾಡಿಕೊಂಡಿದೆ ಎಂದು ಸೆಬಿ ನೋಟಿಸ್​ನಲ್ಲಿ ಆರೋಪಿಸಿದೆ. ಹಿಂಡನ್​ಬರ್ಗ್ ಸಂಸ್ಥೆ ಅದಾನಿ ಗ್ರೂಪ್ ಕುರಿತ ತನ್ನ ವರದಿಯ ಕರಡು ಪ್ರತಿಯನ್ನು ತನ್ನ ಕ್ಲೈಂಟ್ ಆಗಿರುವ ಕಿಂಗ್​ಡನ್ ಕ್ಯಾಪಿಟಲ್ ಮ್ಯಾನೇಜ್​ವೆುಂಟ್​ನೊಂದಿಗೆ 2022ರ ನ. 30ರಂದು ಹಂಚಿಕೊಂಡಿತ್ತು ಎಂದು ಸೆಬಿ ಆರೋಪಿಸಿದೆ.

ಶೋಕಾಸ್ ನೋಟಿಸ್ ಪ್ರಕಾರ, ಕಿಂಗ್​ಡನ್ ಕ್ಯಾಪಿಟಲ್​ನಲ್ಲಿ ಮಾರ್ಕ್ ಕಿಂಗ್​ಡನ್ ಶೇ. 99 ಪಾಲನ್ನು ಹೊಂದಿದ್ದರು ಮತ್ತು ‘ಎಂ ಕಿಂಗ್​ಡನ್ ಅಫ್​ಶೋರ್ ಮಾಸ್ಟರ್ ಫಂಡ್ ಎಲ್​ಪಿ’ ಫಲಾನುಭವಿ ಮಾಲೀಕರಾಗಿದ್ದರು. 2022ರ ಡಿಸೆಂಬರ್​ನಿಂದಲೇ ಅದಾನಿ ಎಂಟರ್​ಪ್ರೖೆಸಸ್​ನಲ್ಲಿ ಹೂಡಿಕೆ ಮಾಡಿ, ವರದಿ ಪ್ರಕಟವಾಗುತ್ತಿದ್ದಂತೆ ಷೇರುಗಳನ್ನು ಮಾರಾಟ ಮಾಡಿ 184.24 ಕೋಟಿ ರೂ. ಲಾಭ ಮಾಡಿಕೊಂಡಿತ್ತು ಎಂದು ಸೆಬಿ ಆರೋಪಿಸಿದೆ.

ಭಾರತೀಯ ಮಾರುಕಟ್ಟೆಗಳನ್ನು ಅಸ್ಥಿರಗೊಳಿಸುವ ಮತ್ತು ಅಂತಿಮವಾಗಿ ದೇಶದ ಪ್ರಧಾನಿ ಕುರ್ಚಿಗೆ ಹಾನಿ ಮಾಡುವ ಗುರಿ ಇಟ್ಟುಕೊಂಡ ಭಾರತದೊಳಗಿನ ಮತ್ತು ವಿದೇಶದಲ್ಲಿ ಕುಳಿತ ಕೆಲ ಶಕ್ತಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎನ್ನುವುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ.

| ಜೈ ಅನಂತ್ ದೆಹದ್ರಾಯ್ ಸುಪ್ರೀಂಕೋರ್ಟ್ ವಕೀಲ

ಸುಪ್ರೀಂಕೋರ್ಟ್ ಒಪ್ಪಿರಲಿಲ್ಲ

2023ರಲ್ಲಿ ಅದಾನಿ ಸಮೂಹದ ವಿರುದ್ಧ ಸ್ಟಾಕ್ ಮಾರ್ಕೆಟ್ ಮ್ಯಾನಿಪ್ಯುಲೇಷನ್ ಆರೋಪದ ಬಗ್ಗೆ ಸೆಬಿ ತನಿಖೆ ಮಾಡಿದ್ದನ್ನು ಒಪ್ಪಿಕೊಂಡಿದ್ದ ಸುಪ್ರೀಂಕೋರ್ಟ್, ನ್ಯಾಯಾಲಯದ ಮೇಲ್ವಿಚಾರಣೆಯ ಅಥವಾ ಸಿಬಿಐ ತನಿಖೆಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಸೆಬಿ ವಿಚಾರಣಾ ಪ್ರಕ್ರಿಯೆಯ ಮೇಲೆ ನಮಗೆ ವಿಶ್ವಾಸವಿದೆ ಎಂದು ವಕೀಲ ಪ್ರಶಾಂತ್ ಭೂಷಣ್ ಸೇರಿದಂತೆ ಹಲವರಿಗೆ ತಿಳಿಸಿತ್ತು. 2024ರ ಜುಲೈ ತಿಂಗಳಲ್ಲಿ ಪುನರ್ ಪರಿಶೀಲನಾ ಅರ್ಜಿಯನ್ನೂ ವಜಾಗೊಳಿಸಿದ್ದ ಸುಪ್ರೀಂಕೋರ್ಟ್ ಮತ್ತೊಮ್ಮೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದರಿಂದ ಅದಾನಿ ಸಮೂಹಕ್ಕೆ ದೊಡ್ಡ ರಿಲೀಫ್ ಸಿಕ್ಕಂತಾಗಿತ್ತು. ವಿದೇಶಿ ಸಂಸ್ಥೆಯೊಂದು ಭಾರತದ ಉದ್ಯಮ ಸಂಸ್ಥೆ ಮೇಲೆ ಆರೋಪ ಮಾಡಿದಾಕ್ಷಣ ಅದನ್ನು ಒಪ್ಪಿಕೊಂಡು ಭಾರತದಲ್ಲಿ ತನಿಖೆ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನೂ ರವಾನಿಸಲಾಗಿತ್ತು.

ಆರೋಪ ಅಲ್ಲಗಳೆದ ಅದಾನಿ ಸಮೂಹ

ಹಿಂಡೆನ್​ಬರ್ಗ್ ಸಂಸ್ಥೆ ಮಾಡಿರುವ ಆರೋಪಗಳು ದುರುದ್ದೇಶಪೂರಿತ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದೆ. ವಾಸ್ತವ ಮರೆಮಾಚಿ, ಕಾನೂನನ್ನು ನಿರ್ಲಕ್ಷಿಸಿ ತನ್ನ ವೈಯಕ್ತಿಕ ಲಾಭಕ್ಕಾಗಿ ಪೂರ್ವನಿರ್ಧರಿತ ತೀರ್ವನಗಳಿಗೆ ಬರಲಾಗಿದೆ. ಅದಾನಿ ಸಮೂಹದ ವಿರುದ್ಧದ ಈ ಆರೋಪಗಳನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಈ ಬಗ್ಗೆ ಹಿಂದೆಯೇ ಎಲ್ಲ ತನಿಖೆಗಳನ್ನು ಮಾಡಲಾಗಿದೆ. ಆರೋಪಗಳು ಆಧಾರರಹಿತವೆಂದು ಸಾಬೀತಾಗಿದೆ. 2024ರ ಜನವರಿಯಲ್ಲಿ ಸುಪ್ರೀಂಕೋರ್ಟ್ ಕೂಡ ಆರೋಪಗಳನ್ನು ವಜಾಗೊಳಿಸಿದೆ. ನಮ್ಮ ಸಾಗರೋತ್ತರ ಕಂಪನಿ ವ್ಯವಹಾರಗಳು ಸಂಪೂರ್ಣ ಪಾರದರ್ಶಕ. ಎಲ್ಲ ಸಂಬಂಧಿತ ವಿವರಗಳನ್ನು ಹಲವಾರು ಸಾರ್ವಜನಿಕ ದಾಖಲೆಗಳಲ್ಲಿ ಬಹಿರಂಗಪಡಿಸಲಾಗಿದೆ. ವರದಿಯಲ್ಲಿ ಉಲ್ಲೇಖಿಸಲಾದ ವ್ಯಕ್ತಿಗಳು ಅಥವಾ ವಿಚಾರಗಳೊಂದಿಗೆ ಅದಾನಿ ಗ್ರೂಪ್ ಯಾವುದೇ ವಾಣಿಜ್ಯ ಸಂಬಂಧ ಹೊಂದಿಲ್ಲ ಎಂದು ಅದಾನಿ ಸಮೂಹ ಹೇಳಿಕೆ ಬಿಡುಗಡೆ ಮಾಡಿದೆ.

ಉತ್ತರಿಸದ ಹಿಂಡನ್​ಬರ್ಗ್

ಭಾರತದಲ್ಲಿ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಹಿಂಡನ್​ಬರ್ಗ್​ಗೆ ಸೆಬಿಯಿಂದ ನೋಟಿಸ್ ನೀಡಲಾಗಿತ್ತು. ಆದರೆ, ಇದಕ್ಕೆ ಉತ್ತರವನ್ನು ನೀಡುವ ಬದಲು ಹಿಂಡನ್​ಬರ್ಗ್ ಆರೋಪಗಳ ಮೇಲೆ ಆರೋಪ ಮಾಡುತ್ತಿರುವುದನ್ನು ಗಮನಿಸಿದರೆ, ಅದರ ಉದ್ದೇಶದ ಬಗ್ಗೆ ಅನುಮಾನ ಮೂಡುತ್ತದೆ ಎಂದಿರುವ ಮಾರುಕಟ್ಟೆ ವಿಶ್ಲೇಷಕರು, ಸೆಬಿಯ ಪ್ರಶ್ನೆ ಮತ್ತು ಅನುಮಾನಗಳ ಬಗ್ಗೆ ಹಿಂಡನ್​ಬರ್ಗ್ ಏಕೆ ಉತ್ತರಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ, ಈ ಬೆಳವಣಿಗೆ ಉದ್ಯಮ ವಲಯದಲ್ಲಿ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲಕರ.

ಪ್ರೀತಿ ಹೆಸರಲ್ಲಿ ನಂಬಿಕೆ ದ್ರೋಹ; ರಾಜ್​ ತರುಣ್​-ಲಾವಣ್ಯ ಕೇಸ್​ ಅಂತ್ಯಕ್ಕೆ ಇದೊಂದೇ ಪರಿಹಾರ: ಆರ್​ಜಿವಿ

Share This Article

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

30 ದಿನಗಳಲ್ಲೇ ಸ್ಲಿಮ್ ಆ್ಯಂಡ್​ ಫಿಟ್​ ಆಗಬೇಕಾ? ಪ್ರತಿದಿನ ಇಡ್ಲಿ ತಿನ್ನಿ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…